ಬೆಂಗಳೂರು : ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಲ್ಯಾಬ್ ಟೆಕ್ನಿಷಿಯನ್ನನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಬ್ಬಾಳ ಖಾಸಗಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ್ ಬಂಧಿತ ಆರೋಪಿ.
ಅನಾರೋಗ್ಯ ಹಿನ್ನೆಲೆ ಸೆಪ್ಟೆಂಬರ್ 3ರಂದು ವೃದ್ಧೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಸಿಟಿ ಸ್ಕ್ಯಾನ್ ಮಾಡಲು ಸೂಚಿಸಿದ್ದರಿಂದ ಪರೀಕ್ಷೆ ಒಳಗಾಗಲು ವೃದ್ಧೆ ಹೋಗಿದ್ದರು. ಈ ವೇಳೆ, ಸಿಟಿ ಸ್ಕ್ಯಾನ್ ವಿಭಾಗದಲ್ಲಿ ಅಶೋಕ್ ಕಾರ್ಯ ನಿರ್ವಹಿಸುತ್ತಿದ್ದ. ಆರೋಪಿ ಪರೀಕ್ಷೆ ನೆಪದಲ್ಲಿ ವೃದ್ಧೆಯ ಎದೆ ಹಾಗೂ ಹೊಟ್ಟೆ ಭಾಗವನ್ನು ಮುಟ್ಟಿದ್ದಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ವೃದ್ಧೆಗೆ ಏನೋ ನೆಪ ಹೇಳಿದ್ದಾನೆ. ಕೆಲ ಕ್ಷಣಗಳ ಬಳಿಕ ವೃದ್ದೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಇದರಿಂದ ಹೆದರಿ ಹೊರಬಂದ ವೃದ್ದೆಗೆ ಈ ಬಗ್ಗೆ ಯಾರಿಗೂ ಹೇಳದಂತೆ ಅಶೋಕ್ ಬೆದರಿಕೆ ಹಾಕಿದ್ದಾನೆ. ಘಟನೆ ಸಂಬಂಧ ಲ್ಯಾಬ್ನಲ್ಲಿ ನಡೆದ ವಿಷಯವನ್ನು ವೃದ್ಧೆ ಗಂಡನಿಗೆ ತಿಳಿಸಿದ್ದಾರೆ. ಈ ಸಂಬಂಧ ನೀಡಿದ ದೂರಿನ ಮೇರೆಗೆ ಕೊಡಿಗೆಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಲಕ್ಷ್ಮೀ ಪ್ರಸಾದ್ ತಿಳಿಸಿದರು.
ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಾಂಶುಪಾಲನ ಬಂಧನ : ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಖಾಸಗಿ ಶಾಲೆಯ ಪ್ರಾಂಶುಪಾಲರನ್ನು ವರ್ತೂರು ಠಾಣೆಯ ಪೊಲೀಸರು ಬಂಧಿಸಿದ್ದ ಘಟನೆ ಕಳೆದ ಆಗಸ್ಟ್ ತಿಂಗಳು ನಡೆದಿತ್ತು. 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆ ಪ್ರಾಂಶುಪಾಲರನ್ನು ಬಂಧಿಸಿದ್ದಾರೆ.
ಸಂತ್ರಸ್ತ ಬಾಲಕಿ ಎಂದಿನಂತೆ ಶಾಲೆಗೆ ಹೋಗಿದ್ದಳು. ಈ ವೇಳೆ, ಪ್ರಾಂಶುಪಾಲರು ಶಾಲೆಯ ಪಕ್ಕದಲ್ಲಿ ಇದ್ದ ತನ್ನ ಮನೆಗೆ ಬಾಲಕಿಯನ್ನು ಕರೆದೊಯ್ದಿದ್ದರು. ಅಲ್ಲಿ ಬಾಲಕಿಗೆ ದೌರ್ಜನ್ಯ ಎಸಗಿ ಬಳಿಕ ಕೇಕ್ ನೀಡಿ ಮನೆಗೆ ಕಳುಹಿಸಿದ್ದಾರೆ. ಸಂಜೆ ಮನೆಗೆ ಬಂದ ಬಾಲಕಿ ಹೊಟ್ಟೆನೋವು ಎಂದು ಪೋಷಕರಿಗೆ ತಿಳಿಸಿದ್ದಳು. ಈ ವೇಳೆ, ಮಗಳ ಒಳ ಉಡುಪಿನಲ್ಲಿ ರಕ್ತಸ್ರಾವವಾಗಿರುವುದನ್ನು ಗಮನಿಸಿದ ತಾಯಿ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಬಾಲಕಿ ಶಾಲೆ ಪ್ರಾಂಶುಪಾಲರು ದೌರ್ಜನ್ಯ ಎಸಗಿದ ಘಟನೆಯನ್ನು ಬಾಲಕಿ ತಾಯಿಗೆ ವಿವರಿಸಿದ್ದಾಳೆ. ಈ ಸಂಬಂಧ ವರ್ತೂರು ಠಾಣೆಯಲ್ಲಿ ಪ್ರಾಂಶುಪಾಲನನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ : ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 2 ವರ್ಷ ಜೈಲು ಶಿಕ್ಷೆ