ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆ ರಾಜ್ಯ ಮತ್ತೆ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಸಾಲದ ಮೊರೆ ಹೋಗಲು ನಿರ್ಧರಿಸಿದೆ. ಆದಾಯ ಕೊರತೆ ನೀಗಿಸಲು ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದೆ. ಈವರೆಗೆ ರಾಜ್ಯ ಸರ್ಕಾರ ಮಾಡಿರುವ ಸಾಲದ ವರದಿ ಇಲ್ಲಿದೆ.
ಓದಿ: ಆದಾಯ ಕೊರತೆ: 60 ಸಾವಿರ ಕೋಟಿ ರೂ. ಸಾಲ ಪಡೆದ ರಾಜ್ಯ ಸರ್ಕಾರ
ಲಾಕ್‌ಡೌನ್ ಹಿನ್ನೆಲೆ ಈಗ ಮತ್ತೆ ರಾಜ್ಯ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. 2021-22 ಸಾಲಿನಲ್ಲಿ 71,332 ಕೋಟಿ ರೂ. ಸಾಲ ಮಾಡುವುದಾಗಿ ಸರ್ಕಾರ ಈಗಾಗಲೇ ಘೋಷಿಸಿದೆ. ಆದರೆ, ಇದೀಗ ಕೊರೊನಾ ಎರಡನೇ ಅಲೆ ಸೃಷ್ಟಿಸಿದ ಅನಾಹುತ ಹಾಗೂ ಲಾಕ್‌ಡೌನ್ ನಿಂದ ರಾಜ್ಯದ ಬೊಕ್ಕಸ ಸಂಪೂರ್ಣ ಬುಡಮೇಲಾಗಲಿದೆ. ಹೀಗಾಗಿ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಆದಾಯ ಕೊರತೆಯ ಆತಂಕ ಉಂಟಾಗಲಿದ್ದು, ಈ ಮುಂಚೆ ಅಂದಾಜಿಸಲಾಗಿದ್ದ 71,332 ಕೋಟಿ ರೂ.ಗಿಂತಲೂ ಹೆಚ್ಚಿನ ಸಾಲವನ್ನು ಮುಕ್ತ ಮಾರುಕಟ್ಟೆಯಿಂದ ಎತ್ತುವಳಿ ಮಾಡುವ ಅನಿವಾರ್ಯತೆ ಬರಬಹುದು ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈವರೆಗೆ 69,000 ಕೋಟಿ ರೂ. ಸಾಲ:
ಆರ್ಥಿಕ ಸಂಕಷ್ಟ ತೀವ್ರವಾಗಿರುವ ಹಿನ್ನೆಲೆ ರಾಜ್ಯ ಸರ್ಕಾರ ಮುಕ್ತ ಮಾರುಕಟ್ಟೆಯಲ್ಲಿ ಸಾಲ ಎತ್ತುವಳಿ ಮಾಡುವುದು ಅನಿವಾರ್ಯತೆ ಆಗಿದೆ. ಹೀಗಾಗಿ ಮಾರ್ಚ್ ಅಂತ್ಯದ ವರೆಗೆ ಸರ್ಕಾರ ಆರ್ಬಿಐ ಮೂಲಕ ಬರೋಬ್ಬರಿ 69,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ.
ಆರ್ಬಿಐ ಅಂಕಿ - ಅಂಶದ ಪ್ರಕಾರ 2020-21ರ ಆರ್ಥಿಕ ವರ್ಷದಲ್ಲಿ ಸರ್ಕಾರ ಏಪ್ರಿಲ್ ನಿಂದ ಜುಲೈವರೆಗೆ 12,000 ಕೋಟಿ ರೂ. ಸಾಲ ಪಡೆದಿದೆ. ರಾಜ್ಯ ಸರ್ಕಾರ ಆರ್ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲ (ಎಸ್ಡಿಎಲ್) ವನ್ನು ಪಡೆಯತ್ತಿದೆ. ಆಗಸ್ಟ್ ತಿಂಗಳಲ್ಲಿ ಸರ್ಕಾರ ಒಟ್ಟು 7,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಇನ್ನು ಸೆಪ್ಟೆಂಬರ್ ನಲ್ಲಿ ರಾಜ್ಯ ಸರ್ಕಾರ ಒಟ್ಟು 10,000 ಕೋಟಿ ರೂ. ಸಾಲ ಮಾಡಿದೆ.
ಅದೇ ರೀತಿ ಅಕ್ಟೋಬರ್ ತಿಂಗಳಲ್ಲಿ ಆರ್ಬಿಐ ಮೂಲಕ 8,000 ಕೋಟಿ ರೂ. ರಾಜ್ಯ ಅಭಿವೃದ್ಧಿ ಸಾಲವನ್ನು ಮಾಡಿಕೊಂಡಿದೆ. ಇನ್ನು ನವಂಬರ್ ನಲ್ಲಿ ರಾಜ್ಯ ಸರ್ಕಾರ 8,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದ್ದರೆ, ಡಿಸೆಂಬರ್ ನಲ್ಲಿ ಒಟ್ಟು 10,000 ಕೋಟಿ ರೂ. ಸಾಲ ಪಡೆದಿದೆ. ಜನವರಿಯಲ್ಲಿ 2,000 ಕೋಟಿ ರೂ. ಸಾಲ ಮಾಡಿರುವ ಸರ್ಕಾರ ಫೆಬ್ರವರಿ ತಿಂಗಳಲ್ಲಿ 3000 ಕೋಟಿ ರೂ. ಸಾಲ ಮಾಡಿದೆ. ಮಾರ್ಚ್ ತಿಂಗಳಲ್ಲಿ ಮೂರು ಹಂತಗಳಲ್ಲಿ ಒಟ್ಟು 9,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಆ ಮೂಲಕ ರಾಜ್ಯ ಸರ್ಕಾರ 2020-21ನೇ ಸಾಲಲ್ಲಿ ಮಾರ್ಚ್ ಅಂತ್ಯಕ್ಕೆ ಬರೋಬ್ಬರಿ 69,000 ಕೋಟಿ ರೂ. ಸಾಲ ಮಾಡಿಕೊಂಡಿದೆ.
ಈ ವರ್ಷ 85,000 ಕೋಟಿ ದಾಟಲಿರುವ ಸಾಲ:
ಕಳೆದ 2019-20ರ ಆರ್ಥಿಕ ವರ್ಷದಲ್ಲಿ ಕರ್ನಾಟಕ ಆರ್ಬಿಐ ಮೂಲಕ ಎಸ್ಡಿಎಲ್ ರೂಪದಲ್ಲಿ ಒಟ್ಟು 49,500 ಕೋಟಿ ರೂ. ಸಾಲ ಮಾಡಿತ್ತು. ಅದೇ 2020-21 ಸಾಲಿನಲ್ಲಿ ಸಾಲದ ಮೊತ್ತ 69,000 ಕೋಟಿ ರೂ. ಏರಿಕೆಯಾಗಿದೆ. ಆ ಮೂಲಕ ಕಳೆದ ಬಾರಿಗಿಂತ 2020-21ಸಾಲಿನಲ್ಲಿ ಶೇ 50ಕ್ಕೂ ಹೆಚ್ಚು ಸಾಲದಲ್ಲಿ ಏರಿಕೆಯಾಗಿದೆ.
ಈ ಆರ್ಥಿಕ ವರ್ಷದಲ್ಲಿ ಸರ್ಕಾರ 71,332 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿತ್ತು. ಆದರೆ, ಕೊರೊನಾ ಎರಡನೇ ಅಲೆಯ ಅಬ್ಬರ ಮತ್ತು ಹೇರಲಾದ ಲಾಕ್‌ಡೌನ್ ನಿಂದ ಸಾಲದ ಮೊತ್ತ ಅಂದಾಜಿಸಿದ್ದಕ್ಕಿಂತಲೂ ಹೆಚ್ಚಿಗೆ ಮಾಡುವ ಅನಿವಾರ್ಯತೆ ಎದುರಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ರಾಜ್ಯ ಸರ್ಕಾರ ಜೂನ್ ತಿಂಗಳ ವರೆಗಿನ ಮೊದಲ ತ್ರೈ ಮಾಸಿಕದಲ್ಲಿ ಆರ್ಬಿಐ ಮೂಲಕ ಯಾವುದೇ ಸಾಲವನ್ನು ಮಾಡಿಲ್ಲ. ಜುಲೈ ತಿಂಗಳಿಂದ ಎರಡನೇ ತ್ರೈ ಮಾಸಿಕದಲ್ಲಿ ರಾಜ್ಯ ಸರ್ಕಾರ ಆರ್ ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲ ಎತ್ತುವಳಿ ಮಾಡಲು ಪ್ರಾರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯದ ಆರ್ಥಿಕ ಸ್ಥಿತಿಗತಿ, ಆದಾಯ ಕೊರತೆಯ ಹಿನ್ನೆಲೆ ಈ ಬಾರಿ ಮುಕ್ತ ಮಾರುಕಟ್ಟೆಯಲ್ಲಿ 85,000 ಕೋಟಿ ರೂ. ಗೂ ಹೆಚ್ಚು ಸಾಲ ಎತ್ತುವಳಿ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.