ಬೆಂಗಳೂರು: ಮಲಗಿದ್ದ ಏಳು ವರ್ಷದ ಬಾಲಕಿ ಮೇಲೆ ಟೆಂಪೋ ಹರಿದು ಆಕೆ ಸಾವನ್ನಪ್ಪಿರುವ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಶಿವನ್ಯ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಮೃತ ಬಾಲಕಿ ಕುಟುಂಬ ಹಕ್ಕಿಪಿಕ್ಕಿ ಜನಾಂಗದವರಾಗಿದ್ದು, ಕಿವಿಯೋಲೆ, ಸರ ಸೇರಿದಂತೆ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹುಸ್ಕೂರು ಜಾತ್ರೆ ಬಂದಿದ್ದ ಇವರು, ಊರಿಗೆ ಹಿಂದಿರುಗಲು ಬಸ್ ಸಿಗದೇ ಮಾರ್ಕೆಟ್ಗೆ ಬಂದಿದ್ದರು.
ನಿನ್ನೆ ರಾತ್ರಿ ಬಸ್ ಸಿಗದೇ ತೆಂಗಿನಕಾಯಿ ಮಂಡಿ ಬಳಿಯೇ ಮಕ್ಕಳ ಸಮೇತ ಮಹಿಳೆಯರು ಮಲಗಿದ್ದರು. ಈ ವೇಳೆ, ಬೊಲೋರೋ ಟೆಂಪೋದಲ್ಲಿ ಹೂ ಹಾಕಿಕೊಂಡು ಬಂದಿದ್ದ ಚಾಲಕ ಅನ್ಲೋಡ್ ಮಾಡಿ ಹೊರಡಲು ಮುಂದಾಗಿದ್ದ. ಆಗ ರಸ್ತೆ ಬದಿಯಲ್ಲಿ ಮಲಗಿದ್ದನ್ನು ಗಮನಿಸಿದೆ ಟೆಂಪೋ ರಿವರ್ಸ್ ಮಾಡುವಾಗ ಬಾಲಕಿ ಮೇಲೆ ಹತ್ತಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಳು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದನು.
ಘಟನೆ ಸಂಬಂಧ ಸಿಟಿ ಮಾರ್ಕೆಟ್ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.