ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾಗಿದ್ದ ಬಿಜೆಪಿ ಹಾಗೂ ಜೆಡಿಎಸ್‌ನ ತಲಾ ಇಬ್ಬರು ಹಾಗೂ ಕಾಂಗ್ರೆಸ್ನ ಮೂವರು ಸದಸ್ಯರು ಇಂದು ನಿವೃತ್ತಿಯಾದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತ್ರ ಮರು ಆಯ್ಕೆಯಾಗಿದ್ದಾರೆ. ಉಳಿದ ಆರು ಸದಸ್ಯರು ವಿಧಾನಸಭೆಯಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.
ಬಿಜೆಪಿಯ ಲೆಹರ್ ಸಿಂಗ್, ಲಕ್ಷ್ಮಣ ಸವದಿ, ಜೆಡಿಎಸ್‍ನ ಹೆಚ್.ಎಂ.ರಮೇಶ್ ಗೌಡ, ಕೆ.ವಿ.ನಾರಾಯಣಸ್ವಾಮಿ, ಕಾಂಗ್ರೆಸ್ನ ಅಲ್ಲಂ ವೀರಭದ್ರಪ್ಪ, ಎಸ್.ವೀಣಾ ಅಚ್ಚಯ್ಯ ಹಾಗೂ ಆರ್.ಬಿ.ತಿಮ್ಮಾಪೂರ್ ನಿವೃತ್ತರಾಗಿದ್ದಾರೆ.
ಲೆಹರ್ ಸಿಂಗ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಗೆ ಸ್ಪರ್ಧಿಸಿ ಚುನಾಯಿತರಾಗಿದ್ದಾರೆ. ಇವರ ನಿವೃತ್ತಿಯಿಂದ ತೆರವಾದ ಏಳು ಸ್ಥಾನಗಳಿಗೆ ಈಗಾಗಲೇ ಕೇಂದ್ರ ಚುನಾವಣಾ ಆಯೋಗ ಚುನಾವಣೆ ನಡೆಸಿ ಫಲಿತಾಂಶ ಪ್ರಕಟಿಸಿದೆ. ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಏಳು ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಅಯ್ಕೆಯಾಗಿದ್ದಾರೆ.
ಬಿಜೆಪಿಯಿಂದ ಸ್ಪರ್ಧಿಸಿದ್ದ ಲಕ್ಷ್ಮಣ ಸವದಿ, ಟಿ.ನಾರಾಯಣಸ್ವಾಮಿ, ಕೇಶವ ಪ್ರಸಾದ್, ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಎಂ.ನಾಗರಾಜು, ಕೆ.ಅಬ್ದುಲ್ ಜಬ್ಬಾರ್ ಹಾಗೂ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಟಿ.ಎ.ಶರವಣ ಅವಿರೋಧ ಆಯ್ಕೆಯಾಗಿದ್ದಾರೆ.
ಜೂನ್ 16 ರಂದು ಪ್ರಮಾಣ ವಚನ: ಜೂನ್ 16ರಂದು ನೂತನವಾಗಿ ಆಯ್ಕೆಯಾದ ವಿಧಾನ ಪರಿಷತ್ನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಿಂದ ಪರಿಷತ್ತಿನಲ್ಲಿ ಬಿಜೆಪಿಯ ಸಂಖ್ಯಾಬಲ 37 ರಿಂದ 39ಕ್ಕೆ ಏರಿಕೆಯಾಗಲಿದೆ. ಕಾಂಗ್ರೆಸ್ ಸದಸ್ಯರ ಸಂಖ್ಯಾಬಲ 26 ರಿಂದ 25ಕ್ಕೆ ಇಳಿಕೆಯಾದರೆ, ಜೆಡಿಎಸ್ ಸದಸ್ಯರ ಸಂಖ್ಯಾಬಲ 9 ರಿಂದ 8ಕ್ಕೆ ಇಳಿದಿದೆ.
ಇದನ್ನೂ ಓದಿ: ಜೂನ್ 20ರಂದು ಬೆಂಗಳೂರು ಉಪನಗರ ರೈಲು ಯೋಜನೆಗೆ ಪ್ರಧಾನಿ ಮೋದಿ ಅಡಿಗಲ್ಲು