ಬೆಂಗಳೂರು: ಪ್ರತಿ ವರ್ಷ ಎಲ್ಲಾ ಇಲಾಖೆಗಳ ಕಾರ್ಯನಿರ್ವಹಣೆಯ ಬಗ್ಗೆ ಶ್ರೇಯಾಂಕ ನೀಡಲು ಮಾನದಂಡಗಳನ್ನು ನಿಗದಿಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಆಡಳಿತ ಸುಧಾರಣೆಯ ಕುರಿತು ಅವರು ಇಂದು ಸಭೆ ನಡೆಸಿದರು. ನಿರ್ಧಾರ ಕೈಗೊಳ್ಳುವ ಹಂತಗಳು ಕಡಿಮೆ ಆಗಿ ವಿಳಂಬವಿಲ್ಲದೆ ಜನರಿಗೆ ಸುಲಭವಾಗಿ ಸೌಲಭ್ಯಗಳು ದೊರಕುವಂತಾಗಬೇಕು. ಜನರ ಅರ್ಜಿಗಳಿಗೆ ಕೆಲವೇ ಗಂಟೆಗಳಲ್ಲಿ ಉತ್ತರಿಸುವಂತಿರಬೇಕು. ಅತ್ಯಂತ ಕೆಳಮಟ್ಟದಲ್ಲಿ ಹಾಗೂ ಮೇಲ್ಮಟ್ಟದಲ್ಲಿ ಜವಾಬ್ದಾರಿಗಳನ್ನು ನಿಗದಿಪಡಿಸಬೇಕು. ಕಂದಾಯ ಇಲಾಖೆಯ ಕೆಲವು ಹೊಣೆಯನ್ನು ಗ್ರಾಮ ಪಂಚಾಯತ್ಗಳಿಗೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದರು.
![cm meeting](https://etvbharatimages.akamaized.net/etvbharat/prod-images/kn-bng-05-cm-meeting-script-7208080_10012022193156_1001f_1641823316_615.jpg)
ಜಂಟಿ ಕಾರ್ಯದರ್ಶಿಗಳು ಹಾಗೂ ಉಪ ಕಾರ್ಯದರ್ಶಿಗಳನ್ನು ಸಬಲಗೊಳಿಸಬೇಕು. ಪ್ರಾದೇಶಿಕ ಆಯುಕ್ತರು ಬೃಹತ್ ನೀರಾವರಿ, ಭೂಸ್ವಾಧೀನ ಮುಂತಾದ ವಿಷಯಗಳನ್ನು ನಿರ್ವಹಿಸಬೇಕು. ಕಂದಾಯ ಇಲಾಖೆಯ ಸುಧಾರಣೆಯಾದರೆ ಶೇ.40 ರಷ್ಟು ಸರ್ಕಾರಿ ಕೆಲಸ ಕಡಿಮೆಯಾದಂತಾಗುತ್ತದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಚಂಪಾ ಅಂತ್ಯಕ್ರಿಯೆಗೆ ತೆರಳಿದ್ದ ಸಿಎಂ ಬೊಮ್ಮಾಯಿಗೆ ವಕ್ಕರಿಸಿತು ಕೊರೊನಾ!
ನೀರಾವರಿ, ಲೋಕೋಪಯೋಗಿ ಮುಂತಾದ ಅಭಿವೃದ್ಧಿ ಯೋಜನೆಗಳು ಕಾಲಮಿತಿಯೊಳಗೆ ಪೂರ್ಣಗೊಳ್ಳಬೇಕು. ನಿಗದಿತ ಸಮಯದಲ್ಲಿ ಪೂರ್ಣಗೊಳ್ಳದ ಯೋಜನೆಗಳಿಂದ ರಾಜ್ಯಕ್ಕೆ ಅತಿ ಹೆಚ್ಚಿನ ನಷ್ಟ ಉಂಟಾಗುತ್ತಿದೆ ಎಂದರು.
ಕಾಯ್ದೆಗಳಲ್ಲಿ ಬದಲಾವಣೆ, ಪುನಾರಾವರ್ತಿತ ಕಾಯ್ದೆಗಳನ್ನು ಗುರುತಿಸುವ ಕೆಲಸವೂ ಆಗಬೇಕೆಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು. ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಬಿಡುಗಡೆಯಾದರೂ ಬಳಕೆಯಾಗದ ಮೊತ್ತ ಬ್ಯಾಂಕ್ ಖಾತೆಗಳಲ್ಲಿ ಉಳಿದುಕೊಂಡಿದ್ದು, ಈ ಮೊತ್ತವನ್ನು ಕ್ಲಿಯರ್ ಮಾಡಲು ಕ್ರಮ ಕೈಗೊಳ್ಳಲು ಇದೇ ಸಂದರ್ಭದಲ್ಲಿ ತಾಕೀತು ಮಾಡಿದ್ರು.