ಬೆಂಗಳೂರು: ಜನವರಿ-ಫೆಬ್ರವರಿಯಲ್ಲಿ ಕೋವಿಡ್ ಎರಡನೇ ಅಲೆ ಆರಂಭವಾಗುವ ಸಾಧ್ಯತೆ ಇರುವುದರಿಂದ ರಾಜ್ಯದಲ್ಲಿ ಸೆರೊ ಸಮೀಕ್ಷೆ ನಡೆಸಲು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ಆದರೆ ನಗರದಲ್ಲಿ ಸೆರೊ ಸಮೀಕ್ಷೆ ನಡೆಸುವ ಅಗತ್ಯ ಇಲ್ಲ ಎಂದು ಪರೋಕ್ಷವಾಗಿ ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್, ತಜ್ಞರ ಸಮಿತಿ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಸದ್ಯ ನಗರದಲ್ಲಿ ಪ್ರತಿನಿತ್ಯ ಕೋವಿಡ್ ಪ್ರಕರಣ ನೋಡಿದಾಗ 400ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಏರಿಕೆಯಾಗುತ್ತಿಲ್ಲ. ಪಾಸಿಟಿವಿಟಿ ಪ್ರಮಾಣ 1.53ರಷ್ಟಿದೆ. ಕೋವಿಡ್ ಸಾವಿನ ಪ್ರಮಾಣವೂ ಇಳಿಕೆ ಕಂಡಿದ್ದು, ಕಳೆದ ತಿಂಗಳು 271 ಮಂದಿ ಮೃತಪಟ್ಟಿದ್ದು, ಈ ತಿಂಗಳು 130 ಮಾತ್ರ ಇದೆ. ಹೀಗಾಗಿ ನಗರದಲ್ಲಿ ಆತಂಕ ಪಡುವ ಅಗತ್ಯ ಇಲ್ಲ. ಜೊತೆಗೆ ಪ್ರತೀ ದಿನ 45 ಸಾವಿರ ಕೋವಿಡ್ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ. 360, 390 ಮಾತ್ರ ಪ್ರತಿ ದಿನದ ಕೇಸ್ ಇದೆ ಎಂದರು ಹೇಳಿದರು.
ಇನ್ನೂ ಪ್ರಮುಖವಾಗಿ ವೈರಸ್ ನಿಯಂತ್ರಣದಲ್ಲಿಡಲು ಪಾಲಿಕೆ ವೇಗವಾಗಿ ಕೆಲಸ ಮಾಡಬೇಕು. ಹೀಗಾಗಿ ಸೆರೊಲಾಜಿಕಲ್ ಸ್ಟಡಿ ಪ್ರಕಾರ ಎಲ್ಲೆಲ್ಲಿ ಕೋವಿಡ್ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದು ಎಂಬ ಅಂಶದ ಮೇಲೆಗೆ ಅಂತಹ ಕಡೆಗಳಲ್ಲೇ ಹೆಚ್ಚು ಟೆಸ್ಟ್ ಮಾಡಲಾಗುತ್ತಿದೆ. ಪ್ರಮುಖವಾಗಿ ಬೊಮ್ಮನಹಳ್ಳಿ, ಮಹದೇವಪುರ, ದಾಸರಹಳ್ಳಿ ಮೊದಲಾದ ಹೊರವಲಯಗಳಲ್ಲಿ ಹೆಚ್ಚು ಟೆಸ್ಟ್ ಮಾಡಲಾಗುತ್ತಿದೆ. ಜೊತೆಗೆ ಲಂಡನ್, ಯುಕೆಗಳಲ್ಲಿ ಕೋವಿಡ್ ವೈರಸ್ ಜೆನೆಟಿಕ್ ಬದಲಾಗಿದೆ ಎಂಬ ಮಾಹಿತಿ ಬಂದಿದೆ ಎಂದರು.
ಅಪಾರ್ಟ್ಮೆಂಟ್ಗಳಲ್ಲಿ ಹೊಸ ವರ್ಷಾಚರಣೆ ವಿಶೇಷ ಕಾರ್ಯಕ್ರಮಗಳಿಗೂ ಬ್ರೇಕ್
ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ, ಪಬ್, ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ನಿಷೇಧವಿದೆ. ಅಪಾರ್ಟ್ಮೆಂಟ್ಗಳಲ್ಲಿ ಹೆಚ್ಚು ಜನ ಸೇರುವುದಕ್ಕೂ ಇದು ಅನ್ವಯವಾಗಲಿದೆ. ಸರಳವಾಗಿ ಮನೆಗಳಲ್ಲೇ ಮಾಡಿದ್ರೆ ಯಾವುದೇ ಸಮಸ್ಯೆ ಇಲ್ಲ. ಹೆಚ್ಚು ಜನ ಸೇರಿದರೆ 440 ಜನ ಮಾರ್ಷಲ್ಸ್ ಹಾಗೂ ಪೊಲೀಸರು ಇದನ್ನು ನಿಯಂತ್ರಿಸಲಿದ್ದಾರೆ ಎಂದರು.
ಕೋವಿಡ್ ಡೆತ್ ಆಡಿಟ್
ನಗರದಲ್ಲಿ ಪ್ರತೀ ಕೋವಿಡ್ ಸಾವನ್ನು ಡೆತ್ ಆಡಿಟ್ ಮಾಡಲಾಗುತ್ತಿದ್ದು, ಮುಂದೆ ಸಾವನ್ನು ತಡೆಯುವ ಉದ್ದೇಶದಿಂದ ಮಾಡಲಾಗುತ್ತಿದೆ. ಆದಷ್ಟು ಬೇಗ ಟೆಸ್ಟಿಂಗ್ ಮಾಡಿ, ಆಸ್ಪತ್ರೆಗೆ ದಾಖಲಿಸಿದರೆ ಸಾವಿನಿಂದ ಪಾರಾಗಬಹುದು. ತಡವಾಗಿ ಟೆಸ್ಟ್ ಮಾಡಿ, ಆಸ್ಪತ್ರೆ ಅಡ್ಮಿಟ್ ತಡ ಆಗುವುದರಿಂದಲೇ ಕೋವಿಡ್ನಿಂದ ಸಾವುಗಳಾಗುತ್ತಿವೆ ಎಂದರು. ನಗರದ ಸರ್ಕಾರಿ ಆಸ್ಪತ್ರೆಗಳು ಖಾಲಿ ಇರುವುದರಿಂದ ಖಾಸಗಿ ಆಸ್ಪತ್ರೆಗಳ ಬೆಡ್ ಅಗತ್ಯ ಬಿದ್ದಿಲ್ಲ ಎಂದರು.
ಓದಿ...ಹೊಸ ಕೋವಿಡ್ ವೈರಸ್: ಇಂಗ್ಲೆಂಡ್, ನೆದರ್ಲೆಂಡ್ಸ್, ಡೆನ್ಮಾರ್ಕ್ ಪ್ರಯಾಣಿಕರಿಗೆ ನಿಷೇಧ: ಸಚಿವ ಸುಧಾಕರ್