ಬೆಂಗಳೂರು : ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಅಪಘಾತ ಎಸಗಿದ ಚಾಲಕನಿಗೆ ಸಾರ್ವಜನಿಕರು ಥಳಿಸಿರುವ ಘಟನೆ ತಡರಾತ್ರಿ ಬಿಟಿಎಂ ಲೇಔಟ್ ಎರಡನೇ ಹಂತದಲ್ಲಿ ನಡೆದಿದೆ. ಅಪಘಾತ ಎಸಗಿದ ವ್ಯಕ್ತಿಯನ್ನು ವಾಸು ಎಂದು ಗುರುತಿಸಲಾಗಿದೆ.
ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬಂದ ವಾಸು, ಮೂರು ದ್ವಿಚಕ್ರ ವಾಹನ ಹಾಗೂ ಇನ್ನೊಂದು ಕಾರಿ ಡಿಕ್ಕಿ ಹೊಡೆದಿದ್ದಾನೆ. ಅಡ್ಡಾದಿಡ್ಡಿ ಕಾರು ಚಲಾಯಿಸಿದ ವ್ಯಕ್ತಿಯನ್ನು ತಡೆದು ವಿಚಾರಿಸಿದಾಗ, ಆತ ಮದ್ಯದ ಅಮಲಿನಲ್ಲಿ ವಾಹನ ಚಾಲನೆ ಮಾಡಿರುವುದು ತಿಳಿದು ಬಂದಿದೆ. ಇದರಿಂದ ಸಿಟ್ಟಿಗೆದ್ದ ಸಾರ್ವಜನಿಕರು ಚಾಲಕ ವಾಸುಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಆತನನ್ನು ಮೈಕೋಲೇಔಟ್ ಸಂಚಾರಿ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ವೃದ್ಧ ದಂಪತಿಗೆ ಸೇರಿದ ಕಾರಿನ ಚಾಲಕನಾಗಿ ಕೆಲಸ ಮಾಡುತ್ತಿದ್ದ ವಾಸು, ಕಾರ್ಯಕ್ರಮ ಮುಗಿಸಿ ಮನೆಗೆ ಹೋಗುವಾಗ ಅಪಘಾತ ಎಸಗಿರುವಿದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.
ಬಸ್ - ಟಾಟಾ ಸುಮೋ ನಡುವೆ ಅಪಘಾತ.. ಏಳು ಮಂದಿ ಸಾವು : ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ಕಾರು ಮತ್ತು ಬಸ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಅಸ್ಸೋಂ ಮೂಲದವರು ಎಂದು ಹೇಳಲಾಗಿದೆ. ಈ ಯಾತ್ರಾರ್ಥಿಗಳು ತಿರುವಣ್ಣಾಮಲೈ ಅಣ್ಣಾಮಲೈಯರ್ ದೇವಸ್ಥಾನದಲ್ಲಿ ದರ್ಶನ ಮುಗಿಸಿ ಹಿಂತಿರುಗುವಾಗ ಅಪಘಾತದ ಸಂಭವಿಸಿದೆ. ಇವರೆಲ್ಲ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಚೆಂಗಾಮ್ನ ಪಕ್ಕಿರಿಪಾಲಯಂ ಎಂಬಲ್ಲಿ ಧರ್ಮಪುರಿಯಿಂದ ತಿರುವಣ್ಣಾಮಲೈಗೆ ತೆರಳುತ್ತಿದ್ದ ಸರ್ಕಾರಿ ಬಸ್ ಮತ್ತು ತಿರುವಣ್ಣಾಮಲೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಾಟಾ ಸುಮೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ವೇಳೆ, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಗೆ ರವಾನಿಸುವಾಗ ಸಾವನ್ನಪ್ಪಿದ್ದಾರೆ. ಟಾಟಾ ಸುಮೋದಲ್ಲಿ ಒಟ್ಟು 10 ಜನ ಪ್ರಯಾಣಿಸುತ್ತಿದ್ದರು. ಕಾರಿನಲ್ಲಿದ್ದ 4 ಮಂದಿ ಮತ್ತು ಬಸ್ನಲ್ಲಿದ್ದ 10 ಮಂದಿಗೆ ಗಾಯವಾಗಿದ್ದು, ಒಟ್ಟು 14 ಮಂದಿಗೆ ಗಾಯವಾಗಿದೆ. ಗಾಯಾಳುಗಳನ್ನು ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆ ಮತ್ತು ಚೆಂಗಾಮ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ಅಕ್ಟೋಬರ್ 15ರಂದು ಇದೇ ಚೆಂಗಾಮ್ ಬಳಿಯ ಪಕ್ಕಿರಿಪಾಲಯಂ ಬಳಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಅಪಘಾತದಲ್ಲಿ ಮಕ್ಕಳು ಸೇರಿ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು.
ಇದನ್ನೂ ಓದಿ : ದುರ್ಗಾಪೂಜೆ ವೇಳೆ ಕಾಲ್ತುಳಿತ : ಮಗು, ಇಬ್ಬರು ಮಹಿಳೆಯರು ಸೇರಿ ಮೂವರ ಸಾವು