ಬೆಂಗಳೂರು : ಬಿಎಂಟಿಸಿ ಬಸ್ ಚಾಲಕನ ವಾಹನದ ನಿಯಂತ್ರಣ ಕಳೆದುಕೊಂಡಿದ್ದು, ಮುಂದೆ ಹೋಗುತ್ತಿದ್ದ ಬೈಕ್ ಮತ್ತು ಕಾರ್ಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಬಿಎಂಟಿಸಿ ಬಸ್ನಿಂದ ಸರಣಿ ಅಪಘಾತ ಸಂಭವಿಸಿದ್ದು, ಸಾವನ್ನಪ್ಪಿರುವ ಬೈಕ್ ಸವಾರನನ್ನು ಆಯೂಬ್ ಎಂದು ಗುರುತಿಸಲಾಗಿದೆ. ಈ ಘಟನೆ ತಡರಾತ್ರಿ ಭಾರತೀಯ ಸಿಟಿ ಕ್ರಾಸ್ ಬಳಿ ಸಂಭವಿಸಿದೆ.
ಅಪಘಾತ ಸಂಭವಿಸಿದ್ದು ಹೇಗೆ?: ನಾಗವಾರ, ಯಲಹಂಕ ಮಾರ್ಗದ ಬಸ್ ಬೆಳ್ಳಳ್ಳಿ ಕಡೆಯಿಂದ ಹೆಗಡೆನಗರ ಮಾರ್ಗವಾಗಿ ಹೊಗುತ್ತಿತ್ತು. ಭಾರತೀಯ ಸಿಟಿ ಜಂಕ್ಷನ್ ಬಳಿ ಟ್ರಾಫಿಕ್ ವಾರ್ಡನ್ ಸೂಚನೆ ಮೇರೆಗೆ ಕಾರುಗಳ ಮತ್ತು ಬೈಕ್‌ಗಳು ನಿಂತಿದ್ದವು. ಈ ವೇಳೆ ಹಿಂದೆಯಿಂದ ವೇಗವಾಗಿ ಬಂದ ಬಿಎಂಟಿಸಿ ಬಸ್ ಟ್ರಾಫಿಕ್ ಸಿಗ್ನಲ್ ಬಳಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್ ಬೈಕ್‌ಗಳು ಸೇರಿದಂತೆ ಇತರ ವಾಹನಗಳನ್ನು ಎದುರಿನ ರಸ್ತೆಯವರೆಗೂ ತಳ್ಳಿಕೊಂಡು ಹೋಗಿದೆ ಎನ್ನಲಾಗ್ತಿದೆ.
ಅಪಘಾತದಲ್ಲಿ ನಾಲ್ವರಿಗೆ ಗಾಯ: ಡಿಕ್ಕಿಯ ರಭಸಕ್ಕೆ ಎರಡು ಕಾರು, ಮೂರು ಬೈಕ್‌ಗಳು ಜಖಂಗೊಂಡಿದ್ದವು. ಸಂಭವಿಸಿದ ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡರು. ಬಳಿಕ ಪೊಲೀಸರಿಗೆ ಮತ್ತು ಆ್ಯಂಬುಲೆನ್ಸ್ ಮಾಹಿತಿ ರವಾನಿಸಿದರು. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಆ್ಯಂಬುಲೆನ್ಸ್ ಸಹ ಸ್ಥಳಕ್ಕೆ ಬಂದು ತಲುಪಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಯಿತು.
ಬೈಕ್ ಸವಾರ ಸಾವು: ಆದ್ರೆ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಆಯೂಬ್ ಸ್ಥಿತಿ ಚಿಂತಾಜನಕವಾಗಿತ್ತು. ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ಮುಂದುವರಿದಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಆಯೂಬ್ ಸಾವನ್ನಪ್ಪಿದ್ದಾರೆ. ಇನ್ನು ಉಳಿದ ಮೂವರಿಗೆ ಚಿಕಿತ್ಸೆ ಮುಂದುವರಿದಿದೆ. ಆಯೂಬ್ ಕುಟುಂಬಸ್ಥರು ಸೇರಿದಂತೆ ಗಾಯಾಳು ಕುಟುಂಬಸ್ಥರಿಗೆ ಪೊಲೀಸರು ಮಾಹಿತಿಯನ್ನು ರವಾನಿಸಿದರು. ಸುದ್ದಿ ತಿಳಿದಾಕ್ಷಣ ಆಯೂಬ್ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದ್ದು, ಆಸ್ಪತ್ರೆಯತ್ತ ಆಯೂಬ್ ಪೋಷಕರು ಮತ್ತು ಸಂಬಂಧಿಗಳು ದೌಡಾಯಿಸಿದ್ದಾರೆ. ಇನ್ನು ಗಾಯಾಳು ಕುಟುಂಬಸ್ಥರು ಸಹ ಆಸ್ಪತ್ರೆಯಲ್ಲಿ ತಮ್ಮ ಸಂಬಂಧಿಕರ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ.
ಟ್ರಾಫಿಕ್ ವಾರ್ಡನ್ಗೂ ಗಾಯ: ಈ ಅಪಘಾತದಲ್ಲಿ ಟ್ರಾಫಿಕ್ ನಿಯಂತ್ರಿಸುತ್ತಿದ್ದ ವಾರ್ಡನ್ಗೂ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದಾರೆ. ಟ್ರಾಫಿಕ್ ಸಿಗ್ನಲ್ ಬಳಿ ವಾಹನಗಳು ನಿಂತಿದ್ದವು. ಈ ವೇಳೆ ಹಿಂಬದಿಯಿಂದ ಬಿಎಂಟಿಸಿ ಬಸ್ ಟ್ರಾಫಿಕ್ ಸಿಗ್ನಲ್ ಬಳಿ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಕೊಂಚ ಮುಂದಕ್ಕೆ ಚಲಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಬಸ್ ಚಾಲಕ ಹೇಳಿದ್ದು ಹೀಗೆ: ಪೊಲೀಸರು ಅಪಘಾತದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಚಾಲಕ ಹಾಗೂ ಬಸ್ನ್ನು ಚಿಕ್ಕಜಾಲ ಸಂಚಾರಿ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ರೇಕ್ ವೈಫಲ್ಯದಿಂದ ಅವಘಡ ಸಂಭವಿಸಿರುವುದಾಗಿ ಚಾಲಕ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಪೊಲೀಸರು ಸಹ ಬಸ್ನ ಬ್ರೇಕ್ ವೈಫಲ್ಯವಾಗಿದೆಯೋ ಅಥವಾ ಚಾಲಕ ಸುಳ್ಳು ಹೇಳುತ್ತಿದ್ದಾನೆಯೋ ಎಂಬುದು ತನಿಖೆ ಮೂಲಕ ತಿಳಿದು ಬರಬೇಕಾಗಿದೆ. ಚಾಲಕನನ್ನು ಬಂಧಿಸಿರುವ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಿದ್ದಾರೆ. ಈ ಘಟನೆ ಕುರಿತು ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಓದಿ: ಆಸ್ಪತ್ರೆಯಲ್ಲಿ ಬೆಂಕಿ: ದಟ್ಟ ಹೊಗೆಗೆ ಉಸಿರುಗಟ್ಟಿ ವೈದ್ಯ ದಂಪತಿ ಸೇರಿ ಐವರ ಸಾವು