ಬೆಂಗಳೂರು: ಕೋವಿಡ್-19 ಪರಿಸ್ಥಿತಿ ಸುದೀರ್ಘ ಅವಧಿಗೆ ಉಳಿಯುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಗೆ ಪ್ರತ್ಯೇಕವಾಗಿ ದೂರದರ್ಶನದ ಚಾನೆಲ್ ಆರಂಭಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.
ಈ ಕುರಿತು ಆರ್ಥಿಕ ಮತ್ತು ಭೌತಿಕ ಅಂಕಿಅಂಶಗಳ ವರದಿಯನ್ನು ವಾರದೊಳಗೆ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ನಿನ್ನೆ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ದೂರದರ್ಶನದ ಹೆಚ್ಚುವರಿ ನಿರ್ದೇಶಕ ರಾಜಕುಮಾರ್ ಉಪಾಧ್ಯಾಯ ಅವರೊಂದಿಗೆ ಸಚಿವ ಸುರೇಶ್ ಕುಮಾರ್ ಚರ್ಚೆ ನಡೆಸಿದ್ದಾರೆ. ಪ್ರತ್ಯೇಕ ಟಿವಿ ಚಾನೆಲ್ ಆರಂಭಿಸುವ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ದೂರದರ್ಶನದ ಚಂದನ ವಾಹಿನಿಯಲ್ಲಿ SSLC ಮಕ್ಕಳಿಗಾಗಿ ಪ್ರಸಾರವಾಗುತ್ತಿರುವ ಪುನರ್ಮನನ ತರಗತಿಗಳು ಅತ್ಯಂತ ಜನಪ್ರಿಯವಾಗಿವೆ. ಕಳೆದ ವಾರ ಚಂದನದ ಎಲ್ಲಾ ಕಾರ್ಯಕ್ರಮಗಳ ಪೈಕಿ ಈ ತರಗತಿಗಳು ಅತಿ ಹೆಚ್ಚು TRP ಗಳಿಸಿವೆ. ಹೀಗಾಗಿ ರಾಜ್ಯದ ಶಿಕ್ಷಣ ಇಲಾಖೆಗಾಗಿಯೇ ದೂರದರ್ಶನದ ಚಾನೆಲ್ ಒಂದನ್ನು ಬಾಡಿಗೆ ಪಡೆಯುವುದರ ಕುರಿತು ಚರ್ಚೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಅಗತ್ಯ ಬಿದ್ದಾಗ ತರಗತಿಗಳನ್ನು, ಪುನರ್ಮನನ ತರಗತಿಗಳನ್ನು ಮಾಡಿಸಲು ಹಾಗೂ ಪರಿಣಿತರಿಂದ ವಿವಿಧ ವಿಷಯಗಳ ಬಗ್ಗೆ ಪಾಠಗಳನ್ನು ಕಲಿಸಲು ಇದು ಉಪಯೋಗಕ್ಕೆ ಬರಲಿದೆ..