ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ 10 ಮೇ 1931ರಲ್ಲಿ ಚಿದಾನಂದ ಮೂರ್ತಿಯವರು ಜನಿಸಿದರು. ಕನ್ನಡ ಲೇಖಕ, ವಿದ್ವಾಂಸ, ಸಂಶೋಧಕ ಹಾಗೂ ಇತಿಹಾಸ ತಜ್ಞರಾಗಿದ್ದರು.

ಹಂಪಿಯ ಸ್ಮಾರಕಗಳನ್ನು ಉಳಿಸಲು ಹಾಗೂ ಕನ್ನಡ ಭಾಷೆಗ ಶಾಸ್ತ್ರೀಯ ಸ್ಥಾನ ಗಳಿಸಲು ಇವರು ಮಾಡಿದ ಚಳವಳಿ ಅನನ್ಯ. 1952ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನದೊಂದಿಗೆ ಎಂ.ಎ ಪದವಿ ಪೂರ್ಣಗೊಳಿಸಿದ ಇವರು, ಕುವೆಂಪು, ಪುತೀನ ಹಾಗೂ ರಾಘವಾಚಾರರ ಪ್ರಭಾವಕ್ಕೊಳಗಾಗಿದ್ದರು.
1957ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾದರು. 1968ರ ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು.
10 ಅಕ್ಟೋಬರ್1990ರಲ್ಲಿ ಸ್ವಯಂ ಸೇವಾ ನಿವೃತ್ತಿ ಪಡೆದರು. ಅಮೆರಿಕಾ, ಇಂಗ್ಲೆಂಡ್, ಇಟಲಿ ಸೇರಿದಂತೆ ಮುಂತಾದ ದೇಶ ಸುತ್ತಿದ್ದು, ವಿಶ್ವಮಟ್ಟದ ಐತಿಹಾಸಿಕ ಭಾಷಾ ವಿಜ್ಞಾನ ಸಮ್ಮೇಳನದಲ್ಲಿ ಪ್ರಬಂಧ ಕೂಡಾ ಮಂಡಿಸಿದ್ದಾರೆ.
25ಕ್ಕೂ ಹೆಚ್ಚು ಪುಸ್ತಕ ಹಾಗೂ 400ಕ್ಕೂ ಹೆಚ್ಚು ಸಂಪ್ರಬಂಧಗಳನ್ನು ಪ್ರಕಟಿಸಿದ್ದಾರೆ. 4 ದಶಕ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 1965ರಲ್ಲಿ ವಿಜ್ಞಾನದ ಮೂಲತತ್ವಗಳು, 1981ರಲ್ಲಿ ವಾಗಾರ್ಥ ಎಂಬ ಎರಡು ಮುಖ್ಯವಾದ ಭಾಷಾ ಸಂಬಂಧವಾದ ಕೃತಿಗಳು ಪ್ರಕಟ ಮಾಡಿದ್ದರು.
ಚಿಮೂ ಅವರ ಕೃತಿಗಳು
ವೀರಶೈವ ಧರ್ಮ: ಭಾರತೀಯ ಸಂಸ್ಕೃತಿ ಪ್ರಕಾಶನ (2000)
ವಾಗಾರ್ಥ: ಬಪ್ಕೋ ಪ್ರಕಾಶನ (1981)
ವಚನ ಸಾಹಿತ್ಯ (1975)
ಸಂಶೋಧನಾ ತರಂಗ ಸರಸ: ಸಾಹಿತ್ಯ ಪ್ರಕಾಶನ (1966)
ಪುರಾಣ ಸೂರ್ಯ ಗ್ರಹಣ: ಐಬಿಹೆಚ್ ಪ್ರಕಾಶನ (1982)
ಹೀಗೆ ಹತ್ತು ಹಲವು ಕೃತಿಗಳನ್ನು ನೀಡಿದ್ದಾರೆ.
ಪ್ರಶಸ್ತಿಗಳು:
ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಹೊಸತ ಹೊಸತು ಕೃತಿ), ಪಂಪ ಪ್ರಶಸ್ತಿ. ಆಳ್ವಾಸ್ ನುಡಿಸಿರಿ ಪ್ರಶಸ್ತಿ
ಚಿಮೂಗೆ ಅಂತಿಮ ನಮನ: ತನ್ನ ನಂಬಿಕೆಗಳ ಜೊತೆ ಎಂದೂ ರಾಜಿ ಮಾಡಿಕೊಳ್ಳದೇ ಬದುಕಿದ, ಇತಿಹಾಸದ ಸತ್ಯ ಸಂಗತಿಗಳನ್ನು ಪ್ರತಿಪಾದಿಸುತ್ತಾ ಬಂದವರು. ವಿಶೇಷವಾಗಿ ಕನ್ನಡ ನಾಡಿನ ನೆಲ-ಜಲ-ಭಾಷೆ-ಸಂಸ್ಕೃತಿಯ ಕಾವಲುಗಾರನ ರೀತಿ ಎಂ.ಚಿದಾನಂದಮೂರ್ತಿ ಕಾರ್ಯನಿರ್ವಹಿಸಿದವರು.
ಶನಿವಾರ 4 ಗಂಟೆ ನಸುಕಿನ ಜಾವ ನಿಧನರಾದರು. ಬೆಳಗ್ಗೆ 7 ಗಂಟೆಗೆ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಸ್ವಗೃಹಕ್ಕೆ ತರಲಾಗಿದೆ. ರಾಜಕೀಯ ಗಣ್ಯರು, ಹಿರಿಯ ಸಾಹಿತಿಗಳು ಚಿಮೂ ಆತ್ಮಕ್ಕೆ ಶಾಂತಿ ಕೋರಿದ್ದಾರೆ.