ಬೆಂಗಳೂರು: ಈ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ ಅನ್ನೋದನ್ನ ಬಜೆಟ್ ತೋರಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ಕೆಲ ಕಾರ್ಪೋರೇಟ್ಗಳಿಗೆ ಟ್ಯಾಕ್ಸ್ ಕಡಿಮೆ ಮಾಡಿ ಉಪಕಾರ ಮಾಡಲಾಗಿದೆ ಎಂದು ಟೀಕಿಸಿದರು.
ಚುನಾವಣೆ ಸಂದರ್ಭದಲ್ಲಿ 2 ಕೋಟಿ ಉದ್ಯೋಗ ಕೊಡ್ತೀನಿ ಅಂತ ಹೇಳಿದ್ರು. ಆದರೆ, ಅದರ ಬಗ್ಗೆ ಯಾವುದೇ ಚಿಂತನೆ ಬಜೆಟ್ನಲ್ಲಿ ಇಲ್ಲ. ಹೊಸ ಉದ್ಯಮ ಸೃಷ್ಟಿ ಮಾಡೋಕೆ ಏನೂ ಯೋಜನೆ ಇಲ್ಲ ಎಂದರು.
ಇತಿಹಾಸದಲ್ಲೇ ಇದು ದೊಡ್ಡ, ಉದ್ದದ ಬಜೆಟ್. ಹೆಚ್ಚಿಗೆ ಮಾತನಾಡಿ, ಕಡಿಮೆ ಕೆಲಸ ಮಾಡಿದ ಬಜೆಟ್. ಬೆಟ್ಟ ಕೆದರಿ ಇಲಿ ಹಿಡಿದ ಬಜೆಟ್ ಇದು. ಆಯುಷ್ಮಾನ್ ಭಾರತ್ ಯೋಜನೆ ಜಾರಿಯಲ್ಲಿದೆ ಅಂದ್ರು. ಆದ್ರೆ ಆ ಯೋಜನೆ ಅಡಿ ಆಸ್ಪತ್ರೆಗೆ ರೋಗಿಗಳು ಹೋದ್ರೆ ತಿರಸ್ಕರಿಸ್ತಿದ್ದಾರೆ ಎಂದರು.
ಜಿಡಿಪಿ ಪ್ರಗತಿ ಶೇ.10 ರಷ್ಟು ಮಾಡೋದಾಗಿ ವಿಶ್ವಾಸದಿಂದ ಹೇಳ್ತಾರೆ. ಮತ್ತೊಂದು ಕಡೆ ಆರ್ಥಿಕ ತಜ್ಞರು ಹೇಳ್ತಾರೆ. ಶೇ. 3.5 ಇದೆ ಅಂತ. ಈ ಬಜೆಟ್ನಿಂದ ಜನರಿಗೆ ಉಪಯೋಗವೂ ಆಗಿಲ್ಲ, ಜನ ಪರವೂ ಇಲ್ಲ. 2 ಗಂಟೆ 46 ನಿಮಿಷ ಮಾತಾಡಿದ್ದಾರೆ ಅದೆಲ್ಲವೂ ನಿರಾಶೆಯ ಹೇಳಿಕೆಗಳೇ ಎಂದು ಬೇಸರ ವ್ಯಕ್ತಪಡಿಸಿದರು.