ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಲ್ಲಿ ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್ ಆರ್) ನಿಯಮ ಉಲ್ಲಂಘಿಸಿ ಹಲವು ವರ್ಷಗಳಿಂದ ಕಾನೂನುಬಾಹಿರವಾಗಿ ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವ 25 ವೈದ್ಯರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರೋಗ್ಯ ಇಲಾಖೆಯಿಂದ ನಿಯೋಜನೆ ಮೇರೆಗೆ ಪ್ರಾಧಿಕಾರಕ್ಕೆ ಬಂದಿರುವ ಈ ವೈದ್ಯರು ಖಾಲಿ ಉಳಿದಿರುವ ಹುದ್ದೆಗಳನ್ನು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಅಂಕಿತಾಧಿಕಾರಿ ಹಾಗೂ ಆಹಾರ ಸುರಕ್ಷತಾಧಿಕಾರಿ ಹುದ್ದೆಗಳಲ್ಲಿ ಕುಳಿತು ಅಧಿಕಾರ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆಯಲ್ಲಿ 85 ಸಾವಿರ ರೂ. ವಿಶೇಷ ಭತ್ಯೆಯ ಜತೆಗೆ ಲಕ್ಷಾಂತರ ರೂ. ವೇತನ ಸಿಕ್ಕಿದ್ದರೂ ಹೆಚ್ಚಿನ ವೈದ್ಯರೇ ನಿಯೋಜನೆಗೆ ಮೇರೆಗೆ ಪ್ರಾಧಿಕಾರಕ್ಕೆ ಬಂದು ಕಾರ್ಯನಿರ್ವಹಿಸುತ್ತಿದ್ದಾರೆ.
ವೈದ್ಯ ವೃತ್ತಿ ಮಾಡಬೇಕಿರುವ ಇವರು ಪ್ರಾಧಿಕಾರದಲ್ಲಿ ಲಂಚ ಪಡೆದು ಆಹಾರ ಪರವಾನಗಿ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆಲವರು ಎರಡೆರಡು ಕಡೆಗಳಲ್ಲಿ ಕೆಲಸ ನಿರ್ವಹಿಸಿ ವೈದ್ಯಕೀಯ ಭತ್ಯೆ, ವಿಶೇಷ ಭತ್ಯೆಯನ್ನೂ ಪಡೆಯುತ್ತಿದ್ದಾರೆ. ಅಲ್ಲದೆ, ಆಹಾರ ಕಲಬೆರಕೆ ತಡೆಗೆ ಇವರಿಗೆ ಮಾಹಿತಿ ಇಲ್ಲದಂತಾಗಿದೆ. ಇದರಿಂದಾಗಿ ಪರಿಣಾಮಕಾರಿಯಾಗಿ ಆಹಾರ ಕಲಬೆರಕೆ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ.
ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ನಷ್ಟ: ನಿಯೋಜನೆ ಮೇರೆಗೆ ಬಂದಿರುವ ವೈದ್ಯರು ಈಗಾಗಲೇ ವಿಶೇಷ ಭತ್ಯೆ ಪಡೆಯಲು ಅರ್ಹತೆ ಹೊಂದಿರುವುದಿಲ್ಲ. ಆದರೂ, 2018-19ರಿಂದ ಇದುವರೆಗೆ ಅಕ್ರಮವಾಗಿ ಲಕ್ಷಾಂತರ ರೂ. ವಿಶೇಷ ಭತ್ಯೆ ಪಡೆಯುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ.ನಷ್ಟ ಉಂಟು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಪ್ರಾಧಿಕಾರದಲ್ಲಿ ನಿಯೋಜನೆ ಮೇರೆಗೆ ಬಂದಿರುವ ವೈದ್ಯರು, ವೃತ್ತಿಗೆ ಅನುಸಾರವಾದ ಕರ್ತವ್ಯ, ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಹೀಗಾಗಿ, ವಿದ್ಯಾರ್ಹತೆ, ತಜ್ಞತೆ ಮತ್ತು ಕಾರ್ಯ ಸ್ವರೂಪವನ್ನು ಆಧರಿಸಿ ಹಿಂದೆ ವೇತನದಲ್ಲಿ ಪಡೆದಿರುವ ವೈದ್ಯಕೀಯ ಭತ್ಯೆ,ವಿಶೇಷ ಭತ್ಯೆವನ್ನು ಹಿಂದಿರುಗಿಸಬೇಕು. ಪ್ರಾಧಿಕಾರದಲ್ಲಿ ನಿಯೋಜನೆ ಮೇರೆಗೆ ಇರುವವರಿಗೂ ಭತ್ಯೆಗಳನ್ನು ಡ್ರಾ ಮಾಡಬಾರದು. ಅಂಕಿತಾಧಿಕಾರಿಗಳು ಡ್ರಾಯಿಂಗ್ ಆಫೀಸರ್‌ಗಳಾಗಿದ್ದು, ಇದರ ಬಗ್ಗೆ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಸ್ತಾವನೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕೋರಿದೆ.
ಹಲವು ವರ್ಷಗಳಿಂದ ಹುದ್ದೆಗಳು ಖಾಲಿ: ಪ್ರಾಧಿಕಾರದಲ್ಲಿ ಒಟ್ಟು ಮಂಜೂರಾದ 383 ಹುದ್ದೆಗಳ ಪೈಕಿ 119 ಹುದ್ದೆಗಳು ಭರ್ತಿಯಾಗಿದ್ದು, 264 ಹುದ್ದೆಗಳು ಖಾಲಿ ಉಳಿದಿವೆ. ಹಲವು ವರ್ಷಗಳಿಂದ ಖಾಲಿ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಆರೋಗ್ಯ ಇಲಾಖೆಯಿಂದ ನಿಯೋಜನೆ ಮೇರೆಗೆ ಬರುವ ವೈದ್ಯರು, ವೃಂದ ಮತ್ತು ನೇಮಕಾತಿ ನಿಯಮ ಉಲ್ಲಂಘಿಸಿ ಹಲವು ವರ್ಷಗಳಿಂದ ವಿವಿಧ ಹುದ್ದೆಯಲ್ಲಿ ಕುಳಿತು ಕಾರ್ಯಭಾರ ಮಾಡುತ್ತಿದ್ದಾರೆ ಎಂದು ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ ತಿಳಸಿದೆ.
ಇದನ್ನೂಓದಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ 58 ಜನರಿಗೆ ಉದ್ಯೋಗ