ಬೆಂಗಳೂರು : ಬ್ಯಾಂಕ್ ಮತ್ತು ಫೈನಾನ್ಸ್ ಕಂಪನಿಗಳ ಹೆಸರಿನಲ್ಲಿ ನಿರಾಕ್ಷೇಪಣ ಪತ್ರ (ಎನ್ಒಸಿ) ಪಡೆದು ಮಾಲೀಕರಿಂದ ಕಾರು ಖರೀದಿಸಿ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ ಮೂವರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಭಾಕರ್, ಪ್ರಕಾಶ್ ಮತ್ತು ಕಿರಣ್ ಬಂಧಿತರು. ಇವರಿಂದ 90 ಲಕ್ಷ ರೂ ಬೆಲೆಯ ವಿವಿಧ ಕಂಪನಿಗಳ ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ರಾಷ್ಟ್ರೀಯ ಬ್ಯಾಂಕ್ ಸೇರಿದಂತೆ ವಿವಿಧ ಹಣಕಾಸು ಕಂಪನಿಗಳು ತಮ್ಮ ಗ್ರಾಹಕರ ಕಾರುಗಳ ಮೇಲಿನ ಸಾಲ ಇರುವುದನ್ನು ಕಂಡುಕೊಳ್ಳುತ್ತಿದ್ದ ಆರೋಪಿಗಳು ಕಾರಿನ ಮಾಲೀಕರನ್ನು ಸಂಪರ್ಕಿಸಿ ನಿಮ್ಮ ಕಾರುಗಳ ಮೇಲಿನ ಸಾಲವನ್ನು ನಾವೇ ಕಟ್ಟಿಕೊಳ್ಳುತ್ತೇವೆ ಎಂದು ನಂಬಿಸುತ್ತಿದ್ದರು. ಅವರಿಂದ ಕಡಿಮೆ ಬೆಲೆಗೆ ಕಾರು ಖರೀದಿಸುತ್ತಿದ್ದ ಚಾಲಕಿಗಳು ಆರ್ಟಿಓ ಮುಖಾಂತರ ಅಸಲಿ ಕಾರುಗಳ ಮಾಲೀಕರ ಹೆಸರನ್ನು ಬದಲಾಯಿಸಿ ಬೇರೆಯವರಿಗೆ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು.
ಪ್ರಮುಖ ಆರೋಪಿಯಾದ ಕಿರಣ್ ಈ ಹಿಂದೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ. ವಿವಿಧ ಕಾರಣಗಳಿಗಾಗಿ ಕೆಲಸ ತೊರೆದಿದ್ದ. ಕುಡಿತದ ಚಟ ಅಂಟಿಸಿಕೊಂಡಿದ್ದ ಆರೋಪಿ ಬ್ಯಾಂಕ್ಗಳು ನೀಡುವ ಎನ್ಒಸಿ ಬಗ್ಗೆ ತಿಳಿದುಕೊಂಡಿದ್ದ. ಯಾವುದೇ ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿಗಳ ಹೆಸರಿನಲ್ಲಿ ಕ್ಷಣಾರ್ಧದಲ್ಲಿ ಎನ್ಒಸಿ ತಯಾರು ಮಾಡುತ್ತಿದ್ದ. ಎನ್‌ಒಸಿ ಪಡೆದುಕೊಂಡ ಆರೋಪಿ ಕಾರಿನ ಮೇಲೆ ಯಾವುದೇ ಸಾಲ ಇಲ್ಲ ಎಂದು ನಂಬಿಸಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದ ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದರು.
ಇದನ್ನೂ ಓದಿ: ಬಾಡಿಗೆ ಪಡೆದ ಕಾರು ಮಾರಾಟ ಮಾಡುತ್ತಿದ್ದ ಕಿರಾತಕ ಗ್ಯಾಂಗ್ ಅರೆಸ್ಟ್