ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜನ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದಿದೆ. ಆದರೆ, ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಸದ್ಯ ಆಯ್ಕೆಯ ಚಂಡು ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಮೇ 13 ರಂದು ಮತ ಎಣಿಕೆ ನಡೆದಿದ್ದು, ಕಾಂಗ್ರೆಸ್ ಪಕ್ಷ 135 ಸ್ಥಾನ ಗೆದ್ದು ಬಹುಮತ ಪಡೆದಿದೆ. ಇಬ್ಬರು ಪಕ್ಷೇತರರು ಸಹ ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಸದ್ಯ ಪಕ್ಷದ ಶಾಸಕಾಂಗ ನಾಯಕ ಸಿಎಂ ಗಾದಿಗೆ ಏರಲು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರ ಪೈಪೋಟಿ ಏರ್ಪಟ್ಟಿದೆ.
ಸಿಎಂ ಸ್ಥಾನಕ್ಕೆ ಏರಲು ತಾವೇ ಏಕೆ ಸೂಕ್ತ ಎಂಬುದಕ್ಕೆ ಅವರು ವಿವರಣೆಯನ್ನು ಸಹ ಹೈಕಮಾಂಡ್ಗೆ ನೀಡಿದ್ದಾರೆ. ನಿನ್ನೆ ತಡರಾತ್ರಿಯವರೆಗೂ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಶಾಸಕಾಂಗ ಸಭೆ ನಡೆಸಿರುವ ಕಾಂಗ್ರೆಸ್ ರಾಷ್ಟ್ರೀಯ ನಾಯಕರು, ಶಾಸಕರ ಒಲವಿನ ಮಾಹಿತಿ ಹೊತ್ತು ದಿಲ್ಲಿಗೆ ತೆರಳಿದ್ದಾರೆ. ಇದರ ಬೆನ್ನಲ್ಲೇ ಪಕ್ಷದ ಹೈಕಮಾಂಡ್ ಬುಲಾವಿನ ಮೇರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನ 1ಕ್ಕೆ ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ಯಾವುದೇ ಕಾರಣಕ್ಕೂ ದಿಲ್ಲಿಗೆ ತೆರಳುವುದಿಲ್ಲ ಎಂದು ಹೇಳಿಕೊಂಡಿದ್ದ ಡಿಕೆಶಿ ಸಂಜೆ 4ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಸಂಜೆ 5.50ರ ವಿಮಾನದಲ್ಲಿ ಹರಿಪ್ರಸಾದ್ ಸಹ ದಿಲ್ಲಿಗೆ ತೆರಳುತ್ತಿದ್ದಾರೆ.
ಒಟ್ಟಾರೆ ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ತೀವ್ರ ಪೈಪೋಟಿ ನಡೆದಿದ್ದು, ಇದನ್ನು ತಿಳಿಗೊಳಿಸುವ ಯತ್ನವನ್ನು ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೇ ಮಾಡಬೇಕಾಗಿದೆ. ಪಕ್ಷದ ಹೈಕಮಾಂಡ್ ಮಾತಿಗೆ ಯಾವ ನಾಯಕರು ಎಷ್ಟು ಬೆಲೆ ಕೊಡಲಿದ್ದಾರೆ ಎನ್ನುವುದು ಕಾದು ನೋಡಬೇಕಿದೆ. ಪ್ರತಿಯೊಬ್ಬರೂ ತಾವು ಅರ್ಹ ಹಾಗೂ ಪಕ್ಷವನ್ನು ಮುನ್ನಡೆಸಲು ಸೂಕ್ತ ವ್ಯಕ್ತಿ ಎಂದು ಪ್ರತಿಪಾದಿಸಿಕೊಳ್ಳುತ್ತಿದ್ದಾರೆ.
ಸಿದ್ದರಾಮಯ್ಯ ಪ್ರಸ್ತಾಪಗಳೇನು?: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಡೆಯಿಂದ ಗಮನಿಸುವುದಾದರೆ, ಅತ್ಯುತ್ತಮ ಹಾಗೂ ಜನಪರ ಆಡಳಿತವನ್ನು 2013 ರಿಂದ 18ರ ಅವಧಿಯಲ್ಲಿ ನೀಡಿದ್ದೇನೆ. ಆದರೆ ಅದಕ್ಕೆ ಸೂಕ್ತ ಪ್ರಚಾರ ಸಿಗದ ಹಿನ್ನೆಲೆ ಸರ್ಕಾರ ಮರಳಿ ಅಧಿಕಾರಕ್ಕೆ ಬರಲಿಲ್ಲ. ಆದರೆ ಈಗ ಪೂರ್ಣ ಬಹುಮತದ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಹಿಂದೆ ತಾವು ಸಿಎಂ ಆಗಿದ್ದ ಸಂದರ್ಭದಲ್ಲಿದ್ದ ವಾತಾವರಣವೇ ಇದೆ. ಜನ ಉತ್ತಮ ಆಡಳಿತ ನಿರೀಕ್ಷಿಸುತ್ತಿದ್ದಾರೆ. ಅದನ್ನು ನಾನು ಹಿಂದೆ ನೀಡಿದ್ದೇನೆ. ಮತ್ತೊಮ್ಮೆ ಅಂತಹ ಆಡಳಿತವನ್ನು ಜನ ಬಯಸಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಇದರಿಂದ ನನಗೆ ಸಿಎಂ ಸ್ಥಾನ ನೀಡುವುದು ಸೂಕ್ತ. ಅಲ್ಲದೇ ಎಲ್ಲವೂ ಹಿಂದಿನಂತೆ ಸುಗಮವಾಗಿ ಸಾಗಿ ಹೋಗಲಿದೆ. ಹಳೆಯ ವ್ಯವಸ್ಥೆಯನ್ನೇ ಮರಳಿ ಜಾರಿಗೆ ತರುತ್ತೇನೆ ಎಂದಿದ್ದಾರೆ.
ಅಲ್ಲದೇ ರಾಜ್ಯದಲ್ಲಿ ಆಯ್ಕೆಯಾಗಿರುವ ಶೇ.70ಕ್ಕಿಂತ ಹೆಚ್ಚು ಶಾಸಕರು ತಮ್ಮ ನಾಯಕತ್ವವನ್ನು ಮೆಚ್ಚಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದೇನೆ. ನನ್ನ ವಿರುದ್ಧ ಯಾವುದೇ ಆರೋಪ ಇಲ್ಲ. ಆಡಳಿತ ನಡೆಸಲು ನನಗೆ ಯಾವುದೇ ತನಿಖೆ, ವಿಚಾರಣೆ, ಕಿರಿಕಿರಿಗಳು ಇಲ್ಲ. ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಐದು ವರ್ಷ ಈ ಹಿಂದೆ ಪೂರೈಸಿದ್ದು, ಮತ್ತೆ ಅವಕಾಶ ನೀಡಿದರೆ ಅದೇ ಮಾದರಿಯಲ್ಲಿ ಉತ್ತಮ ಹಾಗೂ ಪಾರದರ್ಶಕ ಆಡಳಿತ ನೀಡುತ್ತೇನೆ ಎಂಬ ಭರವಸೆ ಕೊಡುತ್ತಿದ್ದಾರೆ.
ಶಾಸಕರ ಬೆಂಬಲದ ಜತೆ ಹಿಂದೆ ತಮ್ಮ ಸರ್ಕಾರ ಇದ್ದಾಗಿನ ಸಂದರ್ಭದ ಉತ್ತಮ ಕಾರ್ಯ ಶ್ರೀರಕ್ಷೆಯಾಗಲಿದೆ. ಅಲ್ಲದೇ ತಾವು ಅಧಿಕಾರಕ್ಕೆ ಬಂದರೆ ಪ್ರತಿಪಕ್ಷಗಳೂ ಯಾವುದೇ ತಕರಾರು ಮಾಡುವುದಿಲ್ಲ. ಐದು ವರ್ಷ ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸಿ, ಹೊಸ ಕಾರ್ಯಕ್ರಮಗಳ ಮೂಲಕ ಜನ ಮನ್ನಣೆ ಗಳಿಸಬಹುದು ಎಂದು ಮಾಹಿತಿಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ.
ಡಿಕೆ ಶಿವಕುಮಾರ್ ವಿವರಣೆಗಳೇನು ?: ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಆಯ್ಕೆಗೆ ಸಾಕಷ್ಟು ವಿವರಣೆಯನ್ನು ಹೈಕಮಾಂಡ್ ಮುಂದಿಡುತ್ತಿದ್ದಾರೆ. ನಾನು ಪಕ್ಷ ಸಂಘಟನೆಗೆ ಹೆಚ್ಚು ಶ್ರಮಿಸಿದ್ದೇನೆ. ಕಳೆದ ಮೂರು ವರ್ಷ ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದೇನೆ. ಬಳಲಿದ್ದೇನೆ. ಒಂದು ಅವಕಾಶ ನೀಡಿದರೆ ಉತ್ತಮ ಆಡಳಿತ ನೀಡುವ ಭರವಸೆ ಕೊಡುತ್ತೇನೆ ಎನ್ನುತ್ತಿದ್ದಾರೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷರಾದವರಿಗೆ ಸಿಎಂ ಸ್ಥಾನ ನೀಡಬೇಕು ಎಂಬುದನ್ನು ಕೂಡ ಡಿಕೆಶಿ ಬಲವಾಗಿ ಪ್ರಸ್ತಾಪಿಸಿದ್ದಾರೆ.
2020ರಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗುವ ಹೊಣೆ ವಹಿಸಿಕೊಳ್ಳುವಾಗ ಪಕ್ಷ ಸಂಘಟಿಸುವ ಹೊಣೆಗಾರಿಕೆ ನೀಡಲಾಗಿತ್ತು. 2023ರಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಸಿಎಂ ಮಾಡುವ ಭರವಸೆ ನೀಡಲಾಗಿತ್ತು. ಅದೇ ಪ್ರಕಾರ ಈಗ ಪಕ್ಷ ಅಧಿಕಾರಕ್ಕೆ ಬಂದಿದೆ. ಈಗ ಸಿಎಂ ಹುದ್ದೆಯನ್ನು ಹಿಂದೆ ನೀಡಿದ ಭರವಸೆಯಂತೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಜೊತೆಗೆ
ಸಿದ್ದರಾಮಯ್ಯ ಉತ್ತಮ ಆಡಳಿತಗಾರ ಅಂತೆಯೇ ನಾನು ಸಹ ಪಕ್ಷವನ್ನು ಉತ್ತಮವಾಗಿ ಸಂಘಟಿಸಿದ್ದೇನೆ. ಅಧಿಕಾರಕ್ಕೆ ಬರುವಲ್ಲಿ ನನ್ನ ಪ್ರಯತ್ನ ದೊಡ್ಡದಿದೆ. 50-50 ಅಧಿಕಾರ ಹಂಚಿಕೆಗೆ ನಾನು ಸಿದ್ಧ. ಆದರೆ ಮೊದಲ ಅವಧಿ ನನಗೆ ನೀಡಬೇಕೆಂದು ಕೇಳುತ್ತಿದ್ದಾರೆ. ಆದರೆ, ಅವರ ವಿರುದ್ಧ ಸಿಬಿಐ, ಇಡಿ ವಿಚಾರಣೆ ನಡೆಯುತ್ತಿರುವುದು ಹೈಕಮಾಂಡ್ಗೆ ತುಸು ಯೋಚನೆ ಮಾಡುವಂತೆ ಮಾಡಿದೆ. ಆದರೆ ಡಿಕೆಶಿ ತಾವು ಇದನ್ನು ಸಮರ್ಥವಾಗಿ ಎದುರಿಸುತ್ತೇನೆ ಎಂದು ಪ್ರತಿಪಾದಿಸಿದ್ದಾರೆ.
ಒಟ್ಟಾರೆ ಇಬ್ಬರು ಪ್ರಬಲ ನಾಯಕರ ಹಗ್ಗ ಜಗ್ಗಾಟದ ನಡುವೆ ಹೈಕಮಾಂಡ್ಗೆ ದೊಡ್ಡ ಸವಾಲು ಎದುರಾಗಿದೆ. ಪಕ್ಷದ ಶಾಸಕರ ಒಲವು ಹೊಂದಿರುವ ಹಾಗೂ ಸ್ವಚ್ಛ ಹಾಗೂ ಪಾರದರ್ಶಕ ವ್ಯಕ್ತಿತ್ವ ಹೊಂದಿರುವ ಸಿದ್ದರಾಮಯ್ಯಗೆ ಸಿಎಂ ಸ್ಥಾನ ನೀಡುವುದಾ? ಅಥವಾ ಪಕ್ಷ ಅಧಿಕಾರಕ್ಕೆ ಬಂದರೆ ಸಿಎಂ ಸ್ಥಾನ ಕೊಡುವ ಭರವಸೆ ಪಡೆದಿರುವ ಡಿ.ಕೆ. ಶಿವಕುಮಾರ್ಗೆ ಸಿಎಂ ಪಟ್ಟ ನೀಡುವುದಾ? ಎನ್ನುವ ಗೊಂದಲ ಕಾಂಗ್ರೆಸ್ ಹೈಕಮಾಂಡ್ಗೆ ಎದುರಾಗಿದೆ. ಉಭಯ ನಾಯಕರನ್ನೂ ದೆಹಲಿಗೆ ಕರೆಸಿಕೊಳ್ಳುತ್ತಿದ್ದು, ಅಲ್ಲಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ಯತ್ನ ನಡೆಯುತ್ತಿದೆ.
ಇದನ್ನೂ ಓದಿ:ದಿಲ್ಲಿಯತ್ತ ಕೈ ನಾಯಕರು: ಮಹಾನಗರದಲ್ಲಿ ಸಿದ್ದು, ಡಿಕೆಶಿ ಮನೆ ಮುಂದೆ ಅಭಿಮಾನಿಗಳ ದಂಡು