ಬೆಂಗಳೂರು: ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಮಿಸ್ತ್ರಿ ನೇತೃತ್ವದಲ್ಲಿ ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆಯುತ್ತಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಿಂದ ವಿರೋಧ ಪಕ್ಷದ ನಾಯಕ, ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಮಿಸ್ತ್ರಿ ಅವರು ಹಿರಿಯ ಮುಖಂಡರಿಂದ ಒನ್ ಟು ಒನ್ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ಈ ಹಿನ್ನೆಲೆ ಕೈ ನಾಯಕರು ಒಬ್ಬೊಬ್ಬರಾಗಿ ಖಾಸಗಿ ಹೊಟೇಲ್ಗೆ ಆಗಮಿಸುತ್ತಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ರಮಾನಾಥ ರೈ, ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಕೃಷ್ಣಬೈರೇಗೌಡ ಆಗಮಿಸಿದ್ದಾರೆ.
ಕಾಂಗ್ರೆಸ್ನಲ್ಲಿ ವಿರೋಧ ಪಕ್ಷದ ನಾಯಕನ ಪಟ್ಟಕ್ಕೇರಲು ಭಾರಿ ಪೈಪೋಟಿ ನಡೆಯತ್ತಿದೆ. ಮೂಲ ಕಾಂಗ್ರೆಸ್ಸಿಗರು ಹಾಗೂ ವಲಸೆ ಕಾಂಗ್ರೆಸ್ಸಿಗರ ನಡುವೆ ಈ ಸಂಬಂಧ ತೀವ್ರ ಪೈಪೋಟಿ ನಡೆಯುತ್ತಿದೆ. ಸಿದ್ದರಾಮಯ್ಯ ಬಣ, ಮೂಲ ಕಾಂಗ್ರೆಸ್ಸಿಗರ ಬಣಗಳ ನಡುವೆ ಫೈಟ್ ನಡೆಯುತ್ತಿದ್ದು, ಎರಡೂ ಬಣಗಳು ವಿರೋಧ ಪಕ್ಷದ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿವೆ.
ಸಿದ್ದರಾಮಯ್ಯರನ್ನು ಸೈಡ್ ಲೈನ್ ಮಾಡಲು ಮೂಲ ಕಾಂಗ್ರೆಸ್ಸಿಗರು ಪ್ಲಾನ್ ಮಾಡಿ ಹೆಚ್.ಕೆ.ಪಾಟೀಲ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.