ಬೆಂಗಳೂರು: ರಾಜ್ಯದ ಮೂರೂ ರಾಜಕೀಯ ಪಕ್ಷಗಳ ಗಮನ ನಾಳಿನ ಸುಪ್ರೀಂ ತೀರ್ಪಿನ ಮೇಲೆ ಇದ್ದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತರಾದ ಎನ್.ಪಿ.ಬಿರಾದಾರ್ ಕೆ.ಕೆ ಗೆಸ್ಟ್ ಹೌಸ್ಗೆ ಆಗಮಿಸಿರುವುದು ಬಹಳಷ್ಟು ಕುತೂಹಲ ಮೂಡಿಸಿದೆ.
ಸಿಎಂ ಕುಮಾರಸ್ವಾಮಿ ಆಪ್ತ ಎನ್.ಪಿ.ಬಿರಾದಾರ್, ಮುಖ್ಯಮಂತ್ರಿಯಿಂದ ಸಂದೇಶವನ್ನು ಹೊತ್ತು ತಂದರಾ? ಎಂಬುದು ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸುಮಾರು ಒಂದು ತಾಸಿನವರೆಗೆ ಕುಮಾರಕೃಪಾ ಅತಿಥಿ ಗೃಹದಲ್ಲಿ ಇದ್ದ ಅವರು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ಚರ್ಚೆ ನಡೆಸಿದರು.
ಈ ಹಿಂದೆ ರಮೇಶ್ ಜಾರಕಿಹೊಳಿ ಅಸಮಾಧಾನಗೊಂಡಾಗ ಇದೇ ಎನ್.ಪಿ.ಬಿರಾದಾರ್ ಸಿಎಂ ಮಾತಿನ ಮೇಲೆ ಸಾಹುಕಾರ್ರನ್ನ ಸಮಾಧಾನಗೊಳಿಸಿದ್ದರು. ಮೈತ್ರಿ ಸರ್ಕಾರ ಸುಭದ್ರ ಎಂದು ದೋಸ್ತಿ ನಾಯಕರ ಹೇಳಿಕೆಗೂ ಬಿರಾದಾರ್ ಪಾತ್ರಕ್ಕೂ ಲಿಂಕ್ ಇದೆಯಾ? ಡಿ.ಕೆ.ಶಿವಕುಮಾರ್ ಮುಂಬೈ ನಗರದಲ್ಲಿ ಅತೃಪ್ತ ಶಾಸಕರು ತಂಗಿರುವ ಹೋಟೆಲ್ ಮುಂದೆ ಹೋಗಿದ್ದು, ಜನರ ಗಮನ ಬೇರೆಡೆ ಸೆಳೆಯುವುದಕ್ಕಾ? ಎಂಬಿತ್ಯಾದಿ ಪ್ರಶ್ನೆಗಳು ಏಳುತ್ತಿವೆ.
ಇಂದು ಬಿರಾದಾರ್ ಕೆ.ಕೆ ಗೆಸ್ಟ್ ಹೌಸ್ನಲ್ಲಿ ಕೆ.ಸಿ.ವೇಣುಗೋಪಾಲ್, ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್ ಹಾಗೂ ಎಂ.ಬಿ.ಪಾಟೀಲ್ ಜೊತೆ ಚರ್ಚೆ ನಡೆಸಿದ್ದಾದರೂ ಏನು? ಇವೆಲ್ಲಾ ಪ್ರಶ್ನೆಗೆ ನಾಳಿನ ತೀರ್ಪು ಹಾಗೂ ವಿಶ್ವಾಸಮತ ಯಾಚನೆಯ ದಿನವೇ ಉತ್ತರ ಸಿಗಲಿದೆ.