ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಎರಡನೇ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಮೌಲ್ವಿ ಹನೀಫ್ ಅಫ್ಸರ್ ಅಜೀಜ್, ಖಲೀಲ್ ಉಲಾಲ್ ಜಮಾಲ್ ಎಂಬುವರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಆರ್.ಟಿ ನಗರ ಮೂಲದ ಮೌಲ್ವಿ ಹನೀಫ್ ಅಫ್ಸರ್ ಕೋಟಿ ಮೌಲ್ಯದ ಬಂಗಲೆಗಾಗಿ ಮನ್ಸೂರ್ ಬಳಿ ಹಣ ಪಡೆದು ತನ್ನ ಪ್ರಾರ್ಥನೆಗೆ ಬಂದವರನ್ನ ಐಎಂಎನಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಣೆ ಮಾಡಿದ್ದನಂತೆ. ಹೀಗಾಗಿ ಸೆಪ್ಟೆಂಬರ್ನಲ್ಲಿ ಮೌಲ್ವಿಯನ್ನ ಬಂಧಿಸಲಾಗಿತ್ತು. ಮತ್ತೊಬ್ಬ ಖಲೀಲ್ ಉಲಾಲ್ ಜಮಾಲ್ ಶಿವಾಜಿನಗರ ಒಪಿಹೆಚ್ ರಸ್ತೆಯ ಬೇಪಾರಿಯನ್ ಮಸೀದಿಯ ಧರ್ಮಗುರುವಾಗಿದ್ದು, 2017ರಲ್ಲಿ ಹೆಚ್ಬಿಆರ್ ಲೇಔಟ್ನಲ್ಲಿ ಮನ್ಸೂರ್ನಿಂದ ಮೂರು ಕೋಟಿ ಮೌಲ್ಯದ ಮನೆ ಉಡುಗೊರೆಯಾಗಿ ಪಡೆದಿದ್ದನಂತೆ. ಈತ ಕೂಡ ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನ ದುರ್ಬಳಕೆ ಮಾಡಿಕೊಂಡು ಸಾವಿರಾರು ಭಕ್ತರ ಭಾವನೆಗಳ ಜೊತೆ ಆಟವಾಡಿ ಐಎಂಎನಲ್ಲಿ ಹಣ ಹೂಡುವಂತೆ ಪ್ರಚೋದನೆ ನೀಡಿದ್ದ ಎನ್ನಲಾಗಿದೆ.
ಹೀಗಾಗಿ ಧರ್ಮಗುರುಗಳ ಮಾತನ್ನ ನಂಬಿ ಸಾವಿರಾರು ಜನ ಐಎಂಎನಲ್ಲಿ ಹೂಡಿಕೆ ಮಾಡಿದ್ದರು. ಈ ಹಿನ್ನೆಲೆ ಮನ್ಸೂರ್ನಿಂದ ಮೌಲ್ವಿ ಹನೀಫ್ ಅಫ್ಸರ್ ಅಜೀಜ್, ಖಲೀಲ್ ಉಲಾಲ್ ಜಮಾಲ್ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.