ಬೆಂಗಳೂರು: ಕಳೆದ ವಾರ ರೌಡಿ ಮನೆಗಳ ಮೇಲೆ ದಾಳಿ ನಡೆಸಿದ್ದ ನಗರ ಪೊಲೀಸರು ಇದೀಗ ಅಕ್ರಮವಾಗಿ ನಗರದಲ್ಲಿ ನೆಲೆಯೂರಿರುವ ವಿದೇಶಿ ಪ್ರಜೆಗಳ ಮನೆಗಳ ಮನೆ ಮೇಲೆ ಬೆಳ್ಳಂಬೆಳ್ಳಗೆ ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾದಕ ವಸ್ತು ಜಾಲ ಹೆಚ್ಚಾದ ಹಿನ್ನೆಲೆ ಮತ್ತು ವಿದೇಶಿ ಡ್ರಗ್ಸ್ ಫೆಡ್ಲರ್ಗಳ ಹಾವಳಿ ಮಿತಿ ಮೀರಿದ್ದರಿಂದ ನಗರ ಪೂರ್ವ ವಿಭಾಗ ಹಾಗೂ ಈಶಾನ್ಯ, ವೈಟ್ ಫೀಲ್ಡ್ ವಲಯ ಸೇರಿದಂತೆ ನಗರದಲ್ಲಿ ನೆಲೆಯೂರಿರುವ ವಿದೇಶಿಯರ ಮನೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ದಾಖಲಾತಿ ಪರಿಶೀಲನೆ ನಡೆಸಿದ್ದಾರೆ.
ಕಮ್ಮನಹಳ್ಳಿ, ಸಂಪಿಗೆಹಳ್ಳಿ, ರಾಮಮೂರ್ತಿ ನಗರ, ಬಾಣಸವಾಡಿ, ಯಲಹಂಕ, ವೈಟ್ ಫೀಲ್ಡ್ ಸೇರಿದಂತೆ ವಿವಿಧ ಕಡೆಗಳಲ್ಲಿ 6 ಜನ ಎಸಿಪಿ, 20 ಜನ ಇನ್‌ಸ್ಪೆಕ್ಟರ್, 100ಕ್ಕೂ ಹೆಚ್ಚು ಕಾನ್ಸ್ಟೇಬಲ್ಗಳಿಂದ 60ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ 38 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.
ನಗರ ಪೂರ್ವ ವಿಭಾಗದಲ್ಲಿ ಎಸಿಪಿ ಗೌತಮ್ ನೇತೃತ್ವದ ತಂಡ 40 ಕ್ಕಿಂತ ಹೆಚ್ಚು ವಿದೇಶಿ ಪ್ರಜೆಗಳ ಮನೆಗಳ ಮೇಲೆ ದಾಳಿ ನಡೆಸಿದೆ. ಈಶಾನ್ಯ ವಿಭಾಗದಲ್ಲಿ ಎಸಿಪಿಗಳಾದ ಧರ್ಮೆಂದ್ರ ಹಾಗೂ ನಾಗರಾಜ್, ವೈಟ್ ಫೀಲ್ಡ್ ಡಿವಿಷನ್ನಲ್ಲಿ ಎಸಿಪಿ ಪರಮೇಶ್ವರ್ ಹಾಗೂ ಜಗನಾಥ್ ರೈ ನೇತೃತ್ವದ ತಂಡ ದಾಳಿ ನಡೆಸಿ 38 ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ. ಈ ಪೈಕಿ ಓರ್ವ ವಿದೇಶಿ ಪ್ರಜೆ ಮನೆಯಲ್ಲಿ 25 ಗ್ರಾಂ ಗಾಂಜಾ ಪತ್ತೆಯಾದರೆ, ಮತ್ತೋರ್ವ ನಿವಾಸದಲ್ಲಿ 90 ಎಕ್ಸ್ಟೆನ್ಸಿ ಮಾತ್ರೆಗಳು ಪತ್ತೆಯಾಗಿದ್ದು, ಪೊಲೀಸರು ಆ ವಸ್ತುಗಳನ್ನೆಲ್ಲ ಜಪ್ತಿ ಮಾಡಿಕೊಂಡಿದ್ದಾರೆ.
ದಾಳಿ ವೇಳೆ ಹಲವರ ಬಳಿ ದಾಖಲೆಗಳೇ ಇರಲಿಲ್ಲ. ಇನ್ನೂ ಕೆಲವರ ಬಳಿ ಅವಧಿ ಮೀರಿದರೂ ಅಕ್ರಮವಾಗಿ ನೆಲೆಸಿರುವುದು ಕಂಡು ಬಂದಿದೆ. ದಾಖಲಾತಿ ನವೀಕರಣ ಬಗ್ಗೆ ವಿದೇಶಿ ಪ್ರಾದೇಶಿಕ ನೋಂದಣಿ ಕೇಂದ್ರ (FRRO) ಪರಿಶೀಲನೆ ನಡೆಸಲಾಗುವುದು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಎಕ್ಸೆಟೆನ್ಸಿ ಮಾತ್ರೆ ಇಟ್ಟುಕೊಂಡಿದ್ದ ಆರೋಪಿ ವಿರುದ್ದ ಈ ಹಿಂದೆ ಡ್ರಗ್ಸ್ ಪ್ರಕರಣ ದಾಖಲಾಗಿತ್ತು. ಮೂರನೇ ಬಾರಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಬಂಧಿತ ವಿದೇಶಿಯರ ವಿರುದ್ಧ ವಿದೇಶಿ ಕಾಯ್ದೆಯಡಿ ಹಾಗೂ ಮಾದಕ ವಸ್ತು ಇಟ್ಟುಕೊಂಡಿರುವ ಆರೋಪಿಗಳ ಮೇಲೆ ಎನ್ಡಿಪಿಎಸ್ ನಡಿ ಪ್ರಕರಣ ದಾಖಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.