ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿಗೆ ಸಚಿವರೊಬ್ಬರ ಅಧಿಕೃತ ನಿವಾಸ ಕೊರೊನಾ ಭೀತಿಯಿಂದ ಸೀಲ್ ಡೌನ್ ಆಗಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಸೀಲ್ ಡೌನ್ ಭೀತಿಗೆ ಸಿಲುಕಿರುವ ನಡುವೆಯೇ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಸರ್ಕಾರಿ ನಿವಾಸ ಸೀಲ್ಡೌನ್ ಆಗಿದೆ. ಸವೆನ್ ಮಿನಿಸ್ಟರ್ಸ್ ಕ್ವಾಟ್ರಸ್ ನಲ್ಲಿರುವ ಶ್ರೀರಾಮುಲು ನಿವಾಸವನ್ನು ಸೀಲ್ಡೌನ್ ಮಾಡಿದ್ದು, ಏಳು ದಿನಗಳ ಕಾಲ ನಿವಾಸದ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಮೊನ್ನೆ ಗುತ್ತಿಗೆ ವೈದ್ಯರ ಜೊತೆ ಸಚಿವ ಶ್ರೀರಾಮುಲು ಸಭೆ ನಡೆಸಿದ್ದರು. ಸಭೆಗೂ ಮುನ್ನ ಗುತ್ತಿಗೆ ವೈದ್ಯರ ನಿಯೋಗ ಸಿಎಂ ಕಚೇರಿಗೆ ಭೇಟಿ ನೀಡಿತ್ತು. ಸಿಎಂ ಕಚೇರಿಯಲ್ಲಿ ಕೆಲಸ ಮಾಡುವ ಲೇಡಿ ಕಾನ್ಸ್ಟೆಬಲ್ ಅವರ ಪತಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಅಂದು ಗುತ್ತಿಗೆ ವೈದ್ಯರ ನಿಯೋಗವೂ ಆ ಮಹಿಳಾ ಸಿಬ್ಬಂದಿ ಸಂಪರ್ಕಕ್ಕೆ ಬಂದಿರುವ ಶಂಕೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಸಚಿವರ ನಿವಾಸವನ್ನು ಸೀಲ್ ಡೌನ್ ಮಾಡಲಾಗಿದೆ.
ಯಂತ್ರವಿದ್ದರೂ ಸೀಲ್ಡೌನ್ ತಪ್ಪಲಿಲ್ಲ:
ಸಚಿವ ಶ್ರೀರಾಮುಲು ನಿವಾಸದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗಳ ಸಂಚಾರವನ್ನು ಪತ್ತೆ ಮಾಡಲು ಯಂತ್ರವನ್ನು ಅಳವಡಿಸಲಾಗಿದೆ. ಸೋಂಕಿತರು ಆ ಯಂತ್ರದ ವ್ಯಾಪ್ತಿಯಲ್ಲಿ ಸಂಚರಿಸಿದರೆ ಈ ಬಗ್ಗೆ ಅದು ಎಚ್ಚರಿಸುತ್ತದೆ.