ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಎಸ್ಡಿಪಿಐ ಪಾತ್ರವಿದೆ ಎಂಬ ಸುಳಿವು ದೊರೆತಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ.ನಗರದಲ್ಲಿರುವ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ ವೇಳೆ ಮೂವರು ಮೃತಪಟ್ಟಿದ್ದಾರೆ. ನಿನ್ನೆ ಇಡೀ ದಿನ ಈ ಭಾಗದಲ್ಲಿ ಸಂಚರಿಸಿದ್ದೇನೆ. ಹಲವು ಹೊಸ ಹೊಸ ವಿಷಯಗಳು, ವಿಚಾರಗಳು ಬೆಳಕಿಗೆ ಬರುತ್ತಿವೆ. ಎಲ್ಲವನ್ನೂ ಈಗಲೇ ಮಾಧ್ಯಮಗಳ ಮುಂದೆ ಬಹಿರಂಗಪಡಿಸಲು ಸಾಧ್ಯವಿಲ್ಲ. ಮುಂದೆ ಎಲ್ಲವನ್ನು ಸವಿಸ್ತಾರವಾಗಿ ತಿಳಿಸಲಾಗುತ್ತದೆ ಎಂದರು.
ಆರೋಪಿಗಳ ಮೇಲೆ ಕೂಡಲೇ ಎಲ್ಲಾ ಕ್ರಮ ಜರುಗಿಸಲು ಸನ್ನದ್ಧರಾಗಿದ್ದೇವೆ. ಈ ಘಟನೆ ಹಿಂದೆ ಏನೆಲ್ಲಾ ರಾಜಕೀಯ ನಡೆದಿದೆ?, ಯಾರ ಕೈವಾಡ ಇದೆ?, ಯಾವ ಸಂಘಟನೆಗಳ ಕೈವಾಡ ಇದೆ?, ಕೆಲ ರಾಜಕೀಯ ಮುಖಂಡರ ನಡುವಿನ ವೈಮನಸ್ಸು ಕಾರಣನಾ? ಹೀಗೆ, ಎಲ್ಲದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಘಟನೆಗೆ ಕಾರಣರಾದವರು ಯಾರೇ ಆಗಲಿ, ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಬೊಮ್ಮಾಯಿ ಭರವಸೆ ನೀಡಿದರು.