ಬೆಂಗಳೂರು: ವ್ಹೀಲಿಂಗ್ ಶೋಕಿ ತೀರಿಸಿಕೊಳ್ಳಲು ಸಾರ್ವಜನಿಕ ಪ್ರದೇಶದಲ್ಲಿ ನಿಲ್ಲಿಸಿದ್ದ ಬೈಕ್ಗಳನ್ನು ಕದಿಯುತ್ತಿದ್ದ ಆರೋಪಿಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪ್ರೇಜರ್ ಟೌನ್ ನಿವಾಸಿಯಾಗಿರುವ ವಿಕ್ರಂ(20) ಬಂಧಿತ. ಇದೀಗ ಈತ ಜಾಮೀನಿನ ಮೇರೆಗೆ ಹೊರ ಬಂದಿದ್ದಾನೆ. ಒಬ್ಬಂಟಿಗನಾಗಿರುವ ಈತ ನಗರದ ಪುಟ್ಪಾತ್ಗಳಲ್ಲಿ ಮಲಗಿ ಸಣ್ಣ ಪುಟ್ಟ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಅವರಿವರು ಬೈಕ್ ವ್ಹೀಲಿಂಗ್ ಮಾಡುವುದನ್ನು ನೋಡಿದ್ದ ಈತನಿಗೆ ತಾನೂ ಸಹ ವ್ಹೀಲಿಂಗ್ ಮಾಡಬೇಕೆಂಬ ಆಸೆ ಹುಟ್ಟಿದೆ. ಬೈಕ್ ಇಲ್ಲದ ಕಾರಣ ಕೊನೆಗೆ ಕಳ್ಳತನ ದಾರಿ ಆಯ್ಕೆ ಮಾಡಿಕೊಂಡಿದ್ದಾನೆ.
ಗೇರ್ಲೆಸ್ ಬೈಕ್ ಈತನ ಟಾರ್ಗೆಟ್
ಗೇರ್ ಇರುವ ಬೈಕ್ ಓಡಿಸಲು ಬರದಿದ್ದರಿಂದ ಸಾರ್ವಜನಿಕ ಪ್ರದೇಶದಲ್ಲಿ ನಿಲ್ಲಿಸಿದ್ದ ಗೇರ್ಲೆಸ್ ಬೈಕ್ಗಳ ಹ್ಯಾಂಡಲ್ ಮುರಿದು ಕಳ್ಳತನ ಮಾಡುತ್ತಿದ್ದನು. ಬೈಕ್ಗಳನ್ನು ಕದ್ದು ವ್ಹೀಲಿಂಗ್ ಮಾಡಿ ತನ್ನ ಆಸೆ ಈಡೇರಿಸಿಕೊಂಡ ನಂತರ ರೈಲ್ವೇ ನಿಲ್ದಾಣ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಿಲ್ಲಿಸುತ್ತಿದ್ದನು. ಅಲ್ಲದೇ ಕದ್ದಿದ್ದ ಬೈಕ್ಗಳನ್ನು ಯಾರಿಗೂ ಮಾರಾಟ ಮಾಡುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ ?
ಅನ್‌ಲಾಕ್ ನಂತರ ವಾಹನ ಸಂಚಾರ ಬಿರುಸುಗೊಂಡ ಬೆನ್ನಲ್ಲೇ ಇತ್ತೀಚೆಗೆ ಬೈಕ್ ಕದ್ದು ಓಡಿಸುವಾಗ ಚೆಕ್ಪೋಸ್ಟ್ನಲ್ಲಿ ಹಲಸೂರು ಪೊಲೀಸರು ತಡೆದಿದ್ದಾರೆ. ವಾಹನ ದಾಖಲಾತಿ ತೋರಿಸದೆ ಅಸಮರ್ಪಕ ಉತ್ತರ ನೀಡಿದ್ದರಿಂದ ಅನುಮಾನಗೊಂಡ ಸಬ್ ಇನ್‌ಸ್ಪೆಕ್ಟರ್ ಬಸವರಾಜ್ ನೇತೃತ್ವದ ತಂಡ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ. ನಂತರ ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ಕೃತ್ಯ ಬಾಯ್ಬಿಟ್ಟಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ರೈಲ್ವೇ ನಿಲ್ದಾಣ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಪಾರ್ಕ್ ಮಾಡಿದ್ದ 8 ಬೈಕ್ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಹಲಸೂರು, ಬಾಣಸವಾಡಿ, ರಾಮಮೂರ್ತಿ ನಗರ, ಅಶೋಕ ನಗರ ಹಾಗೂ ಬಾಗಲೂರು ಪೊಲೀಸ್ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಭರಣಗಳನ್ನು ಕದಿಯುತ್ತಿದ್ದ ನಾಲ್ಕು ಮಂದಿ ಕುಖ್ಯಾತ ಕಳ್ಳರ ಬಂಧನ
ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕದಿಯುತ್ತಿದ್ದ ನಾಲ್ಕು ಮಂದಿ ಕುಖ್ಯಾತ ಕಳ್ಳರನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ವರ್ತೂರಿನ ದೇವೇಂದ್ರ (24), ಕೆ.ಆರ್.ಪುರದ ಗಣೇಶ್‌ಕುಮಾರ್ (29), ಪೀಣ್ಯದ ಕಾಂತರಾಜು (46) ಹಾಗೂ ಮಾಗಡಿ ರಸ್ತೆಯ ಸಂತೋಷ್ (36) ಬಂಧಿತರು ಎಂಬುದು ತಿಳಿದುಬಂದಿದೆ.
ಆರೋಪಿಗಳಿಂದ 1 ಕೆಜಿ 9 ಗ್ರಾಂ 52 ಲಕ್ಷ ರೂ. ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿ ಆಭರಣಗಳು, 90 ಸಾವಿರ ರೂ. ಮೌಲ್ಯದ ಎರಡು ಕ್ಯಾಮೆರಾ ಜಪ್ತಿ ಮಾಡಲಾಗಿದೆ ಎಂದು ಡಿ.ಸಿ.ಪಿ ಶ್ರೀನಾಥ್ ಮಹದೇವ್ ಜೋಶಿ ತಿಳಿಸಿದ್ದಾರೆ.
ಆರೋಪಿಗಳ ಬಂಧನದಿಂದ ಬೇಗೂರು,ಎಲೆಕ್ಟ್ರಾನಿಕ್ ಸಿಟಿ ಹಾಗೂ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಒಟ್ಟು 18 ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಓದಿ: ಕಟೀಲು ಶ್ರೀದೇವಿಗೆ ಅಶ್ಲೀಲ ಪದಗಳಿಂದ ನಿಂದನೆ: ಕಣ್ಣೀರಿಟ್ಟು ಕ್ಷಮೆ ಕೋರಿದ ಆರೋಪಿ