ಬೆಂಗಳೂರು: ಪ್ರೊಫೆಸರ್ ಸಿ.ಎನ್.ಆರ್.ರಾವ್ ಅವರನ್ನು ಆಧುನಿಕ ವಿಶ್ವೇಶ್ವರಯ್ಯ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಣ್ಣಿಸಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್.ಎಂ.ವಿಶ್ವೇಶ್ವರಯ್ಯ, ಡಾ. ರಾಜಾ ರಾಮಣ್ಣ, ಸರ್ ಸಿ.ವಿ. ರಾಮನ್, ಪ್ರೊ. ಸತೀಶ್ ಧವನ್ ಮತ್ತು ಡಾ. ಕಲ್ಪನಾ ಚಾವ್ಹಾ - 'ವಿಜ್ಞಾನಿ ಮತ್ತು ಇಂಜಿನಿಯರ್ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ'ದಲ್ಲಿ ಪಾಲ್ಗೊಂಡು ಮಾತನಾಡಿ, ಸಿಎನ್ಆರ್ ರಾವ್ ಅವರ ಸಾಧನೆ ಅಪ್ರತಿಮವಾದದ್ದು ಎಂದರು.
ನೈಸರ್ಗಿಕವಾಗಿ ನಾವು ಹೊಂದಿರುವ ಸಂಪನ್ಮೂಲವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ವಾತಾವರಣ ಸಮತೋಲನವನ್ನು ಕಾಪಾಡುತ್ತವೆ. ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಎದುರಾಗುವ ದೊಡ್ಡ ಮಟ್ಟದ ಹಾನಿಯನ್ನು ತಡೆಯಲು ನಾವು ಪರಿಸರವನ್ನು ಉಳಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಸಚಿವ ಡಾ ಅಶ್ವಥ್ ನಾರಾಯಣ ಮಾತನಾಡಿ, ವಿಜ್ಞಾನ-ತಂತ್ರಜ್ಞಾನ ಆಧಾರಿತವಾಗಿ ನಾವು ತುಂಬಾ ಯಶಸ್ಸು ಸಾಧಿಸಿದ್ದೇವೆ. ವಿಜ್ಞಾನದ ಸಂಶೋಧನೆ ಮೂಲಕವೇ ಎಲ್ಲವೂ ಆರಂಭವಾಗಬೇಕಿದೆ. ಈ ನಿಟ್ಟಿನಲ್ಲಿ ನಾವು ಮುಂದಡಿ ಇಡಬೇಕಿದೆ ಸರ್ಕಾರ ಈ ವಿಚಾರದಲ್ಲಿ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ರಿಜ್ವಾನ್ ಅರ್ಷದ್ ವಹಿಸಿದ್ದರು. ವರ್ಚುವಲ್ ಮೂಲಕ ಭಾರತ ರತ್ನ ಪುರಸ್ಕೃತ ಸಿ.ಎನ್.ಆರ್.ರಾವ್ ಭಾಗಿಯಾಗಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ. ಬಿ.ಎನ್. ಗಂಗಾಧರ್ ಹಾಗೂ ಡಾ. ಗೈತಿ ಹಾಸನ್ ಅವರಿಗೆ ಅವರಿಗೆ 2019ನೇ ಸಾಲಿನ ಸರ್ ಎಂ ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರೊಫೆಸರ್ ಲಲಿತ್ ಮೋಹನ್ ಪಟ್ನಾಯಕ್, ಡಾ. ಶೇಖರ್ ಶೆಟ್ಟಿ ಅವರಿಗೆ ಡಾ. ರಾಜಾ ರಾಮಣ್ಣ ರಾಜ್ಯ ಪ್ರಶಸ್ತಿ 2019 ನೀಡಿ ಗೌರವಿಸಲಾಯಿತು.
ಸರ್.ಸಿ.ವಿ.ರಾಮನ್ ಯುವ ವಿಜ್ಞಾನಿ ರಾಜ್ಯಪ್ರಶಸ್ತಿಯನ್ನು ಪ್ರೊಫೆಸರ್ ಎಚ್. ನಾಗಭೂಷಣ, ಡಾ.ಜಿ. ವೆಂಕಟ ಸುಬ್ರಹ್ಮಣಿಯನ್, ಪ್ರೊಫೆಸರ್ ರವಿ ಮಂಜಿತ್ತಾಯಾ, ಡಾ. ದಿನೇಶ್ ನಾಗೇಗೌಡ, ಅವರಿಗೆ ನೀಡಿ ಗೌರವಿಸಲಾಯಿತು. ಪ್ರೊಫೆಸರ್ ಆರ್ ವೆಂಕಟೇಶ್ ಬಾಬು, ಪ್ರೊಫೆಸರ್ ರಾಜಮೋಹನ್ ಬಾಲಕೃಷ್ಣನ್, ಪ್ರೊಫೆಸರ್ ವಿನೋದ್ ಗಣಪತಿ, ಪ್ರೊಫೆಸರ್ ಹರ್ಷವರ್ಧನ್, ಅವರಿಗೆ ಪ್ರೊಫೆಸರ್ ಸತೀಶ್ ಧವನ್ ಯುವ ಎಂಜಿನಿಯರ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಕಲ್ಪನಾ ಚಾವ್ಲಾ ಮಹಿಳಾ ವಿಜ್ಞಾನಿ ರಾಜ್ಯಪ್ರಶಸ್ತಿಗೆ ಪ್ರೊಫೆಸರ್ ಮಾಲತಿ ಸಂಪೂರ್ಣ ಅವರಿಗೆ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ಬಾಲಕನಿಗೆ ಓಪನ್ ಹಾರ್ಟ್ ಸರ್ಜರಿ ಮಾಡದೇ ಕವಾಟ ಬದಲಾಯಿಸಿದ ಜಯದೇವ ವೈದ್ಯರು