ಬೆಂಗಳೂರು : ದಿನದ ಬಹುಕಾಲವನ್ನ ಶಾಲೆಯಲ್ಲೇ ಕಳೆಯುತ್ತಿದ್ದ ಶಾಲಾ ಮಕ್ಕಳು ಕೊರೊನಾ ಕಾರಣಕ್ಕೆ ಮನೆಯಲ್ಲೇ ಉಳಿಯುವಂತಾಗಿತ್ತು. ಬರೋಬ್ಬರಿ 2 ವರ್ಷಗಳ ಬಳಿಕ ನಾಳೆಯಿಂದ ಪ್ರಾಥಮಿಕ ಶಾಲೆಯ 6 ರಿಂದ 8ನೇ ತರಗತಿ ಆರಂಭವಾಗ್ತಿವೆ. ಇಷ್ಟು ದಿನ ಮನೆಯಲ್ಲಿದ್ದ ವಿದ್ಯಾರ್ಥಿಗಳು ಶಾಲೆಗೆ ಹೋಗೋ ಭಾಗ್ಯ ಒದಗಿದೆ.
ಅಂದಹಾಗೇ ಈಗಾಗಲೇ ಮೊದಲ ಹಂತವಾಗಿ 9 ರಿಂದ 12ನೇ ತರಗತಿಯನ್ನ ಯಶಸ್ವಿಯಾಗಿ ಆರಂಭಿಸಿರುವ ಇಲಾಖೆ, 6 ರಿಂದ 8ನೇ ತರಗತಿ ಮಕ್ಕಳ ಮನೆವಾಸ ಅಂತ್ಯಗೊಳಿಸಿದೆ. ಸರ್ಕಾರ ನಿರ್ಧರಿಸಿರುವಂತೆ ನಾಳೆಯಿಂದ ಪ್ರಾಥಮಿಕ ಶಾಲೆಗಳು ಆರಂಭವಾಗುತ್ತಿವೆ.
ದಿನ ಬಿಟ್ಟು ದಿನ ಬ್ಯಾಚ್ ಗಳಲ್ಲಿ ತರಗತಿ ಆರಂಭಿಸಲು ಸೂಚನೆ ಹೊರಡಿಸಲಾಗಿದೆ. ಶೇ.2ಕ್ಕಿಂತ ಪಾಸಿಟಿವ್ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲಾರಂಭವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ತರಗತಿಗಳು ನಡೆಯಲಿವೆ. ಶನಿವಾರ, ಭಾನುವಾರ ಎರಡು ದಿನ ಸ್ಯಾನಿಟೈಸ್ ಮಾಡಲು ತೀರ್ಮಾನಿಸಲಾಗಿದೆ.
6 ರಿಂದ 7ನೇ ತರಗತಿ ಮಕ್ಕಳಿಗೆ ಬೆಳಗ್ಗೆ 10: 30 ರಿಂದ ಮಧ್ಯಾಹ್ನ 1:30ರವರೆಗೆ ತರಗತಿ ನಡೆಸಲಾಗುತ್ತಿದೆ. 8ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ 2 ಗಂಟೆಯಿಂದ 4:30ರ ತರಗತಿ ನಡೆಸಲು ಸೂಚಿಸಲಾಗಿದೆ. ಇನ್ನುಳಿದಂತೆ ಈಗಾಗಲೇ 9 ರಿಂದ ಪಿಯುಸಿಗೆ ಕೊಟ್ಟ ಎಲ್ಲಾ ಗೈಡ್ ಲೈನ್ಸ್ ಇಲ್ಲೂ ಅನ್ವಯವಾಗಲಿವೆ.
ಶಾಲೆ ಆರಂಭಕ್ಕೆ ನೀಡಿರುವ ಗೈಡ್ಲೈನ್ಸ್ಗಳೇನು?
* ಈಗಾಗಲೇ ಬಿಡುಗಡೆ ಮಾಡಲಾಗಿರುವ SOP ಪಾಲಿಸುವುದು
* ಮಕ್ಕಳು ಶಾಲೆಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ
* ಅನುಮತಿ ಪತ್ರದಲ್ಲಿ ವಿದ್ಯಾರ್ಥಿ ಯ ಕೋವಿಡ್ ಸೋಂಕು ಇಲ್ಲದೆ ಇರೋದನ್ನ ಪೋಷಕರು ಧೃಢಿಕರಿಸಬೇಕು
* ಕುಡಿಯುವ ನೀರು ಹಾಗೂ ಆಹಾರ ಮನೆಯಿಂದಲೇ ತರಬೇಕು
* ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು
* ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ.. ಆನ್ ಲೈನ್ ತರಗತಿಗೂ ಅವಕಾಶ
* ಸೋಮವಾರ ದಿಂದ ಶುಕ್ರವಾರದವರೆಗೆ ಮಾತ್ರ ತರಗತಿ ನಡೆಸಬೇಕು
* ಉಳಿದ ಶಾಲೆಯ ಸ್ವಚ್ಚತೆ ಮಾಡಿಕೊಳ್ಳಬೇಕು
ಸ್ಯಾನಿಟೈಸ್ನಲ್ಲಿ ಶಾಲಾಡಾಳಿತ ಬ್ಯುಸಿ
ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲು, ಶಾಲೆಗಳು ಸಿದ್ಧವಾಗುತ್ತಿವೆ. ಎಲ್ಲಾ ಶಾಲೆಗಳಲ್ಲೂ ಸ್ಯಾನಿಟೈಸೇಷನ್ ಕಾರ್ಯ ಜೋರಾಗಿದೆ. ಕ್ಲಾಸ್ ರೂಮ್ಸ್, ಕಾರಿಡಾರ್, ಲೈಬ್ರರಿ ಸೇರಿ ಆವರಣದ ಪ್ರತಿ ಕಾರ್ನರನ್ನು ಸ್ವಚ್ಛ ಮಾಡಲಾಗ್ತಿದೆ ಅಂತಾ ಪ್ರಾಂಶುಪಾಲರಾದ ಸ್ನೇಹ ಶೆಟ್ಟಿ ತಿಳಿಸಿದರು.
ಮಕ್ಕಳ ಸುರಕ್ಷತೆಗಾಗಿ ಇಲಾಖೆಯ ಗೈಡ್ ಲೈನ್ಸ್ ಪ್ರಕಾರ ತಯಾರಿ ನಡೆಸಲಾಗುತ್ತಿದೆ. ಈಗಾಗಲೇ ಎಲ್ಲ ಸಿಬ್ಬಂದಿಗೂ ವ್ಯಾಕ್ಸಿನೇಷನ್ ಆಗಿದೆ. ಪೋಷಕರು ಯಾವುದೇ ಆತಂಕವಿಲ್ಲದೇ ಮಕ್ಕಳನ್ನ ಶಾಲೆಗೆ ಕಳಿಸಿ ಅಂತಾ ಹೇಳುತ್ತಿದ್ದಾರೆ. ಇಷ್ಟುದಿನ ಆನ್ ಲೈನ್ ನಲ್ಲೇ ಇದ್ದ ಮಕ್ಕಳ ಶಿಕ್ಷಣ ನಾಳೆಯಿಂದ ಭೌತಿಕವಾಗಿ ಚಾಲನೆ ಸಿಗಲಿದೆ. ಮುಂದಿನ ಹಂತದಲ್ಲಿ ಇನ್ನುಳಿದ ತರಗತಿಗಳು ಆರಂಭವಾಗುವ ಸಾಧ್ಯತೆ ಇದೆ.