ಮಂಡ್ಯ: ತಾಲೂಕಿನ ಹಂಬರಹಳ್ಳಿ ಸರ್ಕಾರಿ ಶಾಲೆಯಲ್ಲಿ ಬಿಸಿ ಊಟ ಸೇವಿಸಿದ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಮೂವತ್ತಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿದ್ದು, ಮದ್ದೂರು ಪ್ರಾಥಮಿಕ ಕೇಂದ್ರ ಮತ್ತು ಮಂಡ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮಧ್ಯಾಹ್ನ ಎಂದಿನಂತೆ ಮಕ್ಕಳಿಗೆ ಬಿಸಿ ಊಟ ನೀಡಲಾಗಿತ್ತು. ಆದರೆ, ಊಟದ ನಂತರ ಕೆಲವು ಮಕ್ಕಳು ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದವು. ಇವರನ್ನು ಮದ್ದೂರಿನ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಕೆಲವು ಮಕ್ಕಳು ವಾಂತಿ ಬೇಧಿ ಮಾಡಿಕೊಂಡು ತೀವ್ರವಾಗಿ ಅಸ್ವಸ್ಥಗೊಂಡಿವೆ. ಅಂತಹ ಮಕ್ಕಳನ್ನು ಮಂಡ್ಯದ ಮೆಡಿಕಲ್ ಕಾಲೇಜಿಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ.
ಬಿಸಿ ಊಟ ಸೇವಿಸಿದ ಬಳಿಕ ಮಕ್ಕಳು ಅಸ್ವಸ್ಥ: ಮೇಲ್ನೋಟಕ್ಕೆ ಇದು ಊಟದಿಂದ ಆಗಿರುವಂತಹ ಅವಘಡ ಎಂದು ತೋರುತ್ತಿದೆ. ಸ್ಥಳಕ್ಕೆ ಬಿಇಒ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
(ಇದನ್ನೂ ಓದಿ: ಹಲ್ಲಿ ಬಿದ್ದಿರುವ ಶಂಕೆ: ಮಧ್ಯಾಹ್ನದ ಬಿಸಿ ಊಟ ಸೇವಿಸಿ ಮಕ್ಕಳು ಅಸ್ವಸ್ಥ)