ಬೆಂಗಳೂರು: ಕೃಷಿ ಜಮೀನು ಖರೀದಿಸಿ ಅದನ್ನು ಪರಿವರ್ತನೆ ಮಾಡಿಸದೆ ಹಾಗೂ ಪಕ್ಕದ ಗೋಮಾಳವನ್ನು ಒತ್ತುವರಿ ಮಾಡಿ ಶಾಲಾ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು. ಈ ಸಂಬಂಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ರಾಮನಗರ ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ.
ಕ್ರೈಸ್ಟ್ ನಗರ ಎಜುಕೇಷನಲ್ ಅಂಡ್ ಚಾರಿಟಬಲ್ ಸೊಸೈಟಿಯು ಕೃಷಿ ಜಮೀನಿನಲ್ಲಿ ನಿಯಮ ಬಾಹಿರವಾಗಿ ಶಾಲಾ ಕಟ್ಟಡ ನಿರ್ಮಿಸುತ್ತಿದೆ ಎಂದು ಆರೋಪಿಸಿ ರಾಮನಗರದ ಕವನಪುರ ಗ್ರಾಮದ ಪ್ರಭಾವತಿ ಹಾಗೂ ಇತರೆ 17 ಮಂದಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲ ಎಂ.ಈರಪ್ಪ ರೆಡ್ಡಿ ವಾದಿಸಿ, ಕ್ರೈಸ್ಟ್ ಸೊಸೈಟಿ ಕವನಪುರ ಮತ್ತು ಜಕ್ಕನಹಳ್ಳಿ ನಡುವೆ ಕೃಷಿ ಜಮೀನು ಖರೀದಿಸಿದೆ. ಈ ಜಾಗಕ್ಕೆ ಹೊಂದಿರುವ ಗೋಮಾಳವನ್ನೂ ಒತ್ತುವರಿ ಮಾಡಿ ಶಾಲಾ ಕಟ್ಟಡ ನಿರ್ಮಿಸುತ್ತಿದೆ. ಜಮೀನು ಪರಿವರ್ತನೆ ಮಾಡಿಸದೆ, ಯೋಜನೆಗೆ ಅನುಮತಿ ಪಡೆಯದೆ ಕಟ್ಟಡ ನಿರ್ಮಿಸುತ್ತಿದ್ದಾರೆ.
ರಸ್ತೆ ಪಕ್ಕದಲ್ಲೇ ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ. ಈ ಕುರಿತು ಸಂಬಂಧಿಸಿದ ಪ್ರಾಧಿಕಾರಗಳಿಗೆ ದೂರು ನೀಡಿದ್ದರೂ ಕ್ರಮ ಜರುಗಿಸಿಲ್ಲ ಎಂದರು. ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಮನಗರ ಜಿಲ್ಲಾಧಿಕಾರಿ, ತಹಶೀಲ್ದಾರ್, ಶಿಕ್ಷಣ ಇಲಾಖೆ ಆಯುಕ್ತರು, ಬಿಇಒ ಹಾಗೂ ಕ್ರೈಸ್ಟ್ ನಗರ ಎಜುಕೇಷನಲ್ ಅಂಡ್ ಚಾರಿಟಬಲ್ ಸೊಸೈಟಿಗೆ ನೋಟಿಸ್ ಜಾರಿ ಮಾಡಿತು.
ಅಲ್ಲದೇ, ಅರ್ಜಿದಾರರ ಆರೋಪಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲಿಸಲು ಸೂಕ್ತ ಅಧಿಕಾರಿಯನ್ನು ರಾಮನಗರ ಜಿಲ್ಲಾಧಿಕಾರಿ ನೇಮಿಸಬೇಕು. ಆ ಅಧಿಕಾರಿ ಸ್ಥಳ ಪರಿಶೀಲಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗುತ್ತಿದೆಯೇ ಹಾಗೂ ಗೋಮಾಳವನ್ನು ಒತ್ತುವರಿ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.
ನಿಯಮಬಾಹಿರವಾಗಿ ಕಟ್ಟಡ ನಿರ್ಮಿಸುತ್ತಿದ್ದರೆ, ಅದನ್ನು ತಡೆಯುವ ಹಾಗೂ ತೆರವು ಮಾಡುವ ಕೆಲಸವನ್ನು ಕಾನೂನು ರೀತಿ ಕೈಗೊಳ್ಳಬೇಕು. ಈ ಕುರಿತ ವರದಿಯನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿತು.