ಬೆಂಗಳೂರು: ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ತಲುಪುವಲ್ಲಿ ವಿಳಂಬವಾಗುತ್ತಿರುವುದನ್ನು ಮನಗಂಡ ರಾಜ್ಯ ಸರ್ಕಾರ ಸಕಾಲದಲ್ಲಿ ಹಣ ಜಮೆ ಮಾಡಲು ಮುಂದಾಗಿದೆ.
ಈ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಗೃಹಲಕ್ಷ್ಮಿ, ಅನ್ನಭಾಗ್ಯ ಹಾಗೂ ವಿವಿಧ ಭದ್ರತಾ ಪಿಂಚಣಿ ಯೋಜನೆಗಳ ಹಣದ ಬಟವಾಡೆ, ಬಿಲ್ಲು ಸಲ್ಲಿಕೆಗೆ ವೇಳಾಪಟ್ಟಿಯನ್ನು ನಿಗದಿ ಮಾಡಿದೆ. ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳ 20ರೊಳಗೆ ಖಾತೆಗೆ ಜಮೆ ಆಗುವಂತೆ ದಿನಾಂಕ ನಿಗದಿ ಮಾಡಲಾಗಿದೆ.
ಅದರಂತೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯದ ದುಡ್ಡನ್ನು ಪ್ರತಿ ತಿಂಗಳ 20 ರೊಳಗೆ ಪಾವತಿಸಲು ವೇಳಾಪಟ್ಟಿಯನ್ನು ನಿಗದಿ ಮಾಡಿದೆ. ಎರಡೂ ಯೋಜನೆಗಳ ಫಲಾನುಭವಿಗಳಿಗೆ ಹಣ ಪಾವತಿಗೆ ಅನುವಾಗುವಂತೆ ಅದೇ ತಿಂಗಳ ದಿನಾಂಕ 10 ಹಾಗೂ 15ರೊಳಗೆ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಇನ್ನು ಸಾಮಾಜಿಕ ಭದ್ರತಾ ಪಿಂಚಣಿಯನ್ನು ಪ್ರತಿ ತಿಂಗಳು 5ರಂದು ಪಾವತಿಸಲು ಅನುವಾಗುವಂತೆ ಪ್ರತಿ ತಿಂಗಳ ದಿನಾಂಕ 1-5ರೊಳಗೆ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಅನ್ನ ಭಾಗ್ಯ ಹಾಗೂ ಗೃಹ ಲಕ್ಷ್ಮಿ ಯೋಜನೆಯ ಹಣ ಪಾವತಿಯಲ್ಲಿ ವಿಳಂಬವಾಗುತ್ತಿದೆ. ತಾಂತ್ರಿಕ ಕಾರಣದಿಂದ ಹಣ ಪಾವತಿ ವ್ಯತ್ಯಯವಾಗುತ್ತಿದೆ. ಗೃಹ ಲಕ್ಷ್ಮಿ ಯೋಜನೆಯಡಿ ಈವರೆಗೆ ಸುಮಾರು 1.2 ಕೋಟಿ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಆಗಸ್ಟ್ನಿಂದ ಅಕ್ಟೋಬರ್ 31ರ ವರೆಗೆ ಸುಮಾರು 10 ಲಕ್ಷ ಫಲಾನುಭವಿಗಳು ಹಾಗೂ ಸೆಪ್ಟೆಂಬರ್ನಿಂದ ಸುಮಾರು 36 ಲಕ್ಷ ಫಲಾನುಭವಿಗಳು ಮಾಸಿಕ 2,000 ರೂ. ಹಣ ಪಡೆದಿಲ್ಲ.
ಖಜಾನೆ ಆಯುಕ್ತರ ಪ್ರಸ್ತಾವನೆಯಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳ ಫಲಾನುಭವಿ ಆಧಾರಿತ ಕಲ್ಯಾಣ ಹಾಗೂ ಸಬ್ಸಿಡಿ ಯೋಜನೆಗಳ ಪಾವತಿಗಳನ್ನು ನೇರ ವರ್ಗಾವಣೆ ಮಾಡುವ ವ್ಯವಸ್ಥೆ(Direct Benefit Transfer) ಮುಖಾಂತರ ಫಲಾನುಭವಿಗಳ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಗಳಿಗೆ ಡಿ.ಬಿ.ಟಿ ಮತ್ತು ಖಜಾನೆ-2ರ ಮೂಲಕ ಹಣವನ್ನು ಯಾವುದೇ ಅಡೆ ತಡೆಗಳಿಲ್ಲದೇ ಪಾವತಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವೇತನ ಪಾವತಿಸುವ ಸಮಯದಲ್ಲಿ ಸರ್ಕಾರದ ವಿವಿಧ ಫಲಾನುಭವಿ ಆಧಾರಿತ ಯೋಜನೆಗಳ ಬಿಲ್ಲುಗಳ ಸಂಖ್ಯೆ ಹೆಚ್ಚಾದಲ್ಲಿ ವೇತನ ಪಾವತಿ ಮತ್ತು ಡಿ.ಬಿ.ಟಿ ಪಾವತಿಯಲ್ಲಿಯೂ ವಿಳಂಬವಾಗುವ ಸಂಭವವಿರುತ್ತದೆ. ಅಲ್ಲದೇ ಪ್ರತಿ ಕಡತದ ಪರಿಶೀಲನಗೆ ಸಮಯ ಬೇಕಾಗಿರುವುದರಿಂದ ಮಂಜೂರಾತಿ ಪಟ್ಟಿ ಸೃಜನೆಯಲ್ಲಿಯೂ ತಡವಾಗುವುದರಿಂದ ಪಾವತಿಯಲ್ಲಿ ತೊಂದರೆಯಾಗುವ ಸಂಭವವಿರುವುದಾಗಿ ತಿಳಿಸಿರುತ್ತಾರೆ.
ಹೀಗಾಗಿ ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಪಾವತಿ ಮಾಡಲು ಮತ್ತು ಡಿ.ಡಿ.ಓ, ಡಿ.ಬಿ.ಟಿ ಸೆಲ್ ಮತ್ತು ಖಜಾನೆಗಳಿಗೆ ಯಾವುದಾದರೂ ತಾಂತ್ರಿಕ ಆಡಳಿತಾತ್ಮಕ ಸಮಸ್ಯೆ ಬಗೆಹರಿಸಲು ಮತ್ತು ಪ್ರತಿ ಹಂತದಲ್ಲೂ ಸಮನ್ವಯೀಕರಣ ಸುಲಭಗೊಳಿಸಲು ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿರುವ, ಮಾಸಿಕವಾಗಿ ಪಾವತಿಸುವ ಗೃಹಲಕ್ಷ್ಮಿ, ಅನ್ನಭಾಗ್ಯ ಮತ್ತು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಹಂತ ಹಂತವಾಗಿ ಪಾವತಿ ಮಾಡಲು ವೇಳಾಪಟ್ಟಿಯೊಂದಿಗೆ ನಿರ್ಧಿಷ್ಟ ವೇಳೆಯೊಳಗೆ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ಸಂಬಂಧಿತ ಇಲಾಖಾ ಡಿಡಿಓಗಳಿಗೆ ಸೂಚಿಸಲು ಕೋರಿದ್ದರು.
ಆದ್ದರಿಂದ, ಸರ್ಕಾರದ ಫಲಾನುಭವಿ ಆಧಾರಿತ ಯೋಜನೆಗಳನ್ನು ತ್ವರಿತಗತಿಯಲ್ಲಿ ಫಲಾನುಭವಿಗಳಿಗೆ ತಲುಪಿಸಲು, ಪ್ರತಿ ಮಾಸಿಕದ ಕೊನೆಯಲ್ಲಿ ಖಜಾನೆಗಳಲ್ಲಿ ಕೆಲಸದ ಒತ್ತಡಗಳನ್ನು ಕಡಿಮೆಗೊಳಿಸಲು, ಖಜಾನೆಗಳಲ್ಲಿ ಬಿಲ್ಲುಗಳನ್ನು ಪರಿಶೋಧನೆ ಮಾಡಲು ಅನುಕೂಲವಾಗುವ ದೃಷ್ಠಿಯಿಂದ ಯೋಜನೆಗಳಿಗೆ ಸಂಬಂಧಪಟ್ಟ ಹಣ ಸೆಳೆಯುವ ಮತ್ತು ಬಟವಾಡೆ ಮಾಡುವ ಅಧಿಕಾರಿಗಳು ವೇಳಾಪಟ್ಟಿಯನ್ವಯ ನಿಗಧಿತ ಅವಧಿಯೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ ಖಜಾನೆಗಳಿಗೆ ಬಿಲ್ಲು ಸಲ್ಲಿಸಿ ಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆ ಬಗೆಹರಿಸಲು ಸಚಿವೆ ಹೆಬ್ಬಾಳ್ಕರ್ ಸೂಚನೆ