ಬೆಂಗಳೂರು: ಬಿಬಿಎಂಪಿ ಸೇರಿದಂತೆ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗೆ ಮೀಸಲಾತಿ ನಿಗದಿಪಡಿಸಲು 2023ರ ಮಾರ್ಚ್ ಅಂತ್ಯದವರೆಗೂ ಕಾಲಾವಕಾಶ ನೀಡಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಬಿಬಿಎಂಪಿ ಚುನಾವಣೆಗೆ ಮೀಸಲಾತಿ ನಿಗದಿಗೆ ಕಾಲಾವಕಾಶ ಕೋರಿ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಮನವಿ ಆಲಿಸಿದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರಿದ್ದ ವಿಭಾಗೀಯ ಪೀಠ, 2023ರ ಮಾರ್ಚ್ ಅಂತ್ಯದ ವೇಳೆಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ನೀಡಿದೆ.
ವಿಚಾರಣೆ ವೇಳೆ ಸಾಲಿಸೇಟರ್ ಜನರಲ್ ತುಷಾರ್ ಮೆಹ್ತಾ ಹಾಜರಾಗಿ, ಹೈಕೋರ್ಟ್ ಸೂಚನೆ ಮೇರೆಗೆ ಮೀಸಲಾತಿ ನಿಗದಿಪಡಿಸುವ ಪ್ರಕಿಯೆ ನಡೆಯುತ್ತಿದೆ. ಅಲ್ಲದೆ, ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲು ನಿಗದಿಗೆ ಸಮಿತಿ ರಚನೆ ಮಾಡಿದ್ದು, ಪ್ರಕ್ರಿಯೆ ಪ್ರಗತಿಯಲ್ಲಿದೆ. ಹೀಗಾಗಿ ಕಾಲಾವಕಾಶ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಸಮಿತಿ ರಚನೆ ಮಾಡಿದ್ದು, ಅಷ್ಟೊಂದು ಸಮಯ ಏಕೆ ಬೇಕು? ಎಂದು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ಹಿಂದುಳಿದ ವರ್ಗಗಳಿಗೆ ಶೇ. 33ರಷ್ಟು ಮೀಸಲಾತಿ ನಿಡಬೇಕು ಎಂದು ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಮನವಿ ಮಾಡಿದೆ. ಆದ್ದರಿಂದ ಪ್ರಸ್ತುತ ಮೀಸಲಾತಿ ನೀಡಲು ರಾಜ್ಯಾದ್ಯಂತ ಮನೆ ಮನೆ ಸಮೀಕ್ಷೆ ನಡೆಸಬೇಕಾಗಿದ್ದು, ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಚುನಾವಣಾ ಆಯೋಗದ ಪರ ವಕೀಲರು, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಾಕಷ್ಟು ವಿಳಂಬವಾಗಿದೆ. ಕಾಲಾವಕಾಶ ನೀಡಿದಲ್ಲಿ ಮತ್ತೆ ವಿಳಂಬ ಆಗಲಿದೆ ಎಂದರು.
ಆಗ ನ್ಯಾಯಮೂರ್ತಿ ನಜೀರ್ ಅವರು, ಈಗಲೇ ಚುನಾವಣೆ ನಡೆಸಲು ಅವಕಾಶ ನೀಡಿದರೆ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗುವುದಿಲ್ಲ. ಸರ್ಕಾರ ಕೇಳುತ್ತಿರುವ ಕಾಲಾವಕಾಶಕ್ಕೆ ಸಕಾರಣವಿದೆ. ಹೀಗಾಗಿ ಅವಕಾಶ ನೀಡುತ್ತಿರುವುದಾಗಿ ತಿಳಿಸಿದರು.
ಪ್ರಕರಣದ ಹಿನ್ನೆಲೆ: ಬಿಬಿಎಂಪಿಯ 243 ವಾರ್ಡ್‌ಗಳಿಗೆ ನವೆಂಬರ್ 30ರೊಳಗೆ ಮೀಸಲಾತಿ ನಿಗದಿಪಡಿಸಬೇಕು ಹಾಗೂ ಡಿಸೆಂಬರ್ 31ರೊಳಗೆ ಚುನಾವಣೆ ನಡೆಸಬೇಕು ಎಂದು 2022ರ ಸೆಪ್ಟೆಂಬರ್ 30ರಂದು ಹೈಕೋರ್ಟ್ ಆದೇಶ ನೀಡಿತ್ತು. ಆದರೆ, ಈ ಆದೇಶ ಪಾಲನೆಗೆ ಮೂರು ತಿಂಗಳ ಕಾಲಾವಧಿ ವಿಸ್ತರಿಸಲು ಕೋರಿ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದವು.
ಓದಿ: ಐಆರ್ಸಿಟಿಸಿಯಲ್ಲಿ ಕೆಲಸ ನೀಡುವುದಾಗಿ ಆಫರ್.. ನಂಬಿ ಹಣ ಕಳೆದುಕೊಂಡ ರಾಯಚೂರಿನ ಯುವಕರು!