ಬೆಂಗಳೂರು : ತುಳಿತಕ್ಕೊಳಗಾದ ಸಮುದಾಯವನ್ನ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಕಾಂಗ್ರೆಸ್ನಿಂದ ಪರಿಶಿಷ್ಠರು ದೂರ ಸರಿಯುತ್ತಿದ್ದಾರೆ ಎಂದು ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಡಾ. ಬಾಬು ಜಗಜೀವನರಾಂ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಇದನ್ನು ಗಮನಿಸಬೇಕು.
ಅಗತ್ಯ ಅವಕಾಶವನ್ನ ಕಲ್ಪಿಸಿಕೊಡಬೇಕು ಎಂದು ಹೇಳಿದ ಅವರು, ದಲಿತ ಮುಖಂಡರನ್ನ ಗಮನಿಸಿ ಎಂದು ತಮ್ಮ ಹಿರಿಯ ನಾಯಕರನ್ನು ಪರೋಕ್ಷವಾಗಿ ಎಚ್ಚರಿಸಿದರು. ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತರು, ಹಿಂದುಳಿದವರು ಸೇರಿದಂತೆ ಮುಂದುವರೆದವರು ಸಹ ಕಾಂಗ್ರೆಸ್ ಜತೆಗೆ ಇದ್ದರು.
ಇಂದಿರಾ ಗಾಂಧಿ ಜತೆ ಆಗ ಎಲ್ಲಾ ಸಮುದಾಯಗಳು ಇದ್ವು. ಆದ್ರೆ, ಇಂದು ಈ ಸಮುದಾಯಗಳು ದೂರ ಸರಿಯುತ್ತಿವೆ. ಇದನ್ನ ಗ್ರಹಿಸುವಲ್ಲಿ ನಾವು ವಿಫಲವಾಗಿದ್ದೇವೆ. ನಮ್ಮವರು ಭಾಷಣ ಮಾಡ್ತಾರೆ, ಕೆಲಸ ಕೂಡ ಮಾಡುತ್ತಾರೆ. ಆದ್ರೆ, ಕ್ರಿಯಾ ಯೋಜನೆ ಮಾಡುವಲ್ಲಿ ವಿಫಲವಾಗಿದ್ದೇವೆ ಎಂದರು.
ಸಿದ್ದರಾಮಯ್ಯ ಎಲ್ಲಅ ಯೋಜನೆ ಕೊಟ್ರು. ಈಗ ಬಂದಿರುವ ಸರ್ಕಾರ ಎಲ್ಲವನ್ನೂ ನಿಲ್ಲಿಸಿದೆ. ಇದು ರೈತರು ಮತ್ತು ಬಡವರ ಮೇಲೆ ಪರಿಣಾಮ ಬೀರಿದೆ. ನಾವು ಭಿನ್ನಾಭಿಪ್ರಾಯ ಮರೆತು ರಾಜ್ಯದಲ್ಲಿ ಪ್ರಚಾರ ಮಾಡಬೇಕಿದೆ. ರಾಜ್ಯದಲ್ಲಿ ಆಗ್ತಿರುವ ಬೆಳವಣಿಗೆಗಳು ನೋಡಿದ್ರೆ, ಇವರು ಸರ್ಕಾರ ನಡೆಸುತ್ತಿರುವುದು ನೋಡಿದ್ರೆ ಬಹಳ ದಿನ ಸರ್ಕಾರ ಇರಲ್ಲ ಅನ್ನಿಸುತ್ತೆ.
ಎಲ್ಲವೂ ಮಾಧ್ಯಮಗಳಲ್ಲಿ ಬರ್ತಿದೆ. ಹೀಗಾಗಿ ಕಾಂಗ್ರೆಸ್ನಿಂದ ದೂರ ಹೋದ ಸಮುದಾಯಗಳನ್ನು ಎಲ್ಲರೂ ಸೇರಿ ವಾಪಸ್ ತರಬೇಕು. ಎಲ್ಲಾ ಭಿನ್ನಾಭಿಪ್ರಾಯ ಮರೆತು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕೆಲಸ ಮಾಡೋಣ, ಭಿನ್ನಾಭಿಪ್ರಾಯ ಮರೆಯಿರಿ ಎಂದರು.
ಡಿಕೆಶಿ-ಸಿದ್ದರಾಮಯ್ಯ ಭೇಟಿ:
ಸಮಾರಂಭಕ್ಕೆ ಮುನ್ನವೇ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಆಗಮಿಸಿ ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹಾಜರಿದ್ದರು. ರಾಯಚೂರಿನ ಮಸ್ಕಿ ವಿಧಾನಸಭೆ ಕ್ಷೇತ್ರ ಉಪಚುನಾವಣೆ ಪ್ರಚಾರಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ಬೆಳಗ್ಗೆಯೇ ಕಾಂಗ್ರೆಸ್ ಕಚೇರಿಗೆ ತೆರಳಿ ಜಗಜೀವನರಾಂ ಅವರ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡರು.