ಬೆಂಗಳೂರು: ಧರ್ಮಾಚರಣೆ ಅದು ಅವರ ವೈಯ್ಯಕ್ತಿಕ ವಿಚಾರ, ಅವರವರ ಇಷ್ಟ. ನಾವು ಅದನ್ನು ತೆಗೆದು ಹಾಕಲು ಆಗುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸನಾತನ ಧರ್ಮ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸನಾತನ ಧರ್ಮದ ವಿಚಾರ ಮತ್ತೆ ಗದ್ದಲ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರ ಹೇಳಿಕೆ ತಮಿಳಿನಲ್ಲಿದೆ. ನನಗೆ ತಮಿಳು ಬರಲ್ಲ. ಅದನ್ನು ಇನ್ನು ನಾನು ಅರ್ಥಮಾಡಿಕೊಂಡಿಲ್ಲ. ಅದನ್ನು ಭಾಷಾಂತರ ಮಾಡಿಲ್ಲ. ಭಾಷಾಂತರ ಮಾಡಲು ಹೇಳಿದ್ದೇನೆ ಎಂದರು.
ಚುನಾವಣೆ ಸಮಯದಲ್ಲಿನ ಹಿಂದೂ ಧರ್ಮ ಅಲ್ಲ ಅದು ಆಚರಣೆ ಎಂಬ ತಮ್ಮ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಹಿಂದೂ ದರ್ಮದ ಬಗ್ಗೆ ಹೇಳಿಲ್ಲ. ಪುಸ್ತಕದಲ್ಲಿ ಏನಿದೆ ಅಂತ ಹೇಳಿದ್ದೇನೆ. ಈ ತರ ವ್ಯಾಖ್ಯಾನಗಳಿವೆ ಎಂದು ಹೇಳಿದ್ದೆ ಅಷ್ಟೇ. ನಾವೇ ಸ್ವಂತವಾಗಿ ಏನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮದೇಶದಲ್ಲಿ ಬೆಳಗ್ಗೆ ನೀಡಿದ ಹೇಳಿಕೆಗಳು ಸಾಯಂಕಾಲದ ವೇಳೆಗೆ ಬೇರೆ ಬೇರೆ ಸ್ವರೂಪ ಪಡೆಯುತ್ತವೆ. ಆ ಸ್ವರೂಪ ಏನು ಎಂದು ತಿಳಿದರೆ, ಅದರ ಬಗ್ಗೆ ಖಂಡಿತವಾಗಿ ಹೇಳಬಹುದು. ದೇಶದಲ್ಲಿ ಬಹಳಷ್ಟು ಜಾತಿ ಧರ್ಮಗಳಿವೆ. ಆಚರಣೆ ವೈಯುಕ್ತಿಕ ವಿಚಾರವನ್ನು ನಾವು ಹೇಳುವುದಕ್ಕೆ ಆಗುವುದಿಲ್ಲ ಎಂದರು. ಹಿಂದೂ ಹಾಗೂ ಸನಾತನ ಧರ್ಮದ ಬಗ್ಗೆ ದೊಡ್ಡ ಮಟ್ಟದ ಚರ್ಚೆಯಾಗಬೇಕು. ಬಹಳಷ್ಟು ಸಮಸ್ಯೆಗಳಿವೆ. ಚರ್ಚೆಯಾದ ಬಳಿಕ ಸಮಸ್ಯೆಗೆ ಪರಿಹಾರ ಹುಡುಕಲು ಆಗುತ್ತದೆ ಎಂದು ತಿಳಿಸಿದರು.
ತಮಿಳುನಾಡಿನ ಮುಖ್ಯಮಂತ್ರಿ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ರೋಗಗಳಿಗೆ ಹೋಲಿಕೆ ಮಾಡಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸನಾತನ ಧರ್ಮ ಡೆಂಘಿ ಮತ್ತು ಮಲೇರಿಯಾ ಇದ್ದಂತೆ. ಅದನ್ನು ಕೇವಲ ವಿರೋಧ ಮಾಡಬಾರದು. ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಸನಾತನ ಧರ್ಮದ ಕುರಿತು ಈ ಹೇಳಿಕೆ ಭಾರಿ ವಿರೋಧ ವ್ಯಕ್ತವಾಗಿವೆ. ಇದನ್ನು ಖಂಡಿಸಿ ಹಲವಾರು ಹಿಂದೂ ಸಮಾಜದ ಮುಖಂಡರು ಉದಯನಿಧಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರಾಜಕೀಯ ವಲಯದಲ್ಲೂ ಈ ಹೇಳಿಕೆ ಟೀಕಿಗೆ ಗ್ರಾಸವಾಗಿದೆ. ದೇಶಾದ್ಯಂತ ಭಾರಿ ವಿವಾದವನ್ನು ಹುಟ್ಟುಹಾಕಿದ್ದು, ಹಲವು ಬಿಜೆಪಿ ನಾಯಕರು ಮತ್ತು ಹಿಂದೂ ಮುಖಂಡರು ಉದಯನಿಧಿ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸನಾತನ ಎಂದರೆ ಶಾಶ್ವತ ಎಂದರ್ಥ : ಶ್ರೀ ನಿರ್ಮಲಾನಂದ ಸ್ವಾಮೀಜಿ