ಬೆಂಗಳೂರು: ಅಹಿಂದ ಸಮಾವೇಶದ ಬಗ್ಗೆ ಸಿದ್ದರಾಮಯ್ಯ ನನ್ನ ಬಳಿ ಚರ್ಚೆ ಮಾಡಿಲ್ಲ. ನಮ್ಮ ಪಕ್ಷವೇ ಅಹಿಂದ ಆಗಿರುವುದರಿಂದ ಅಹಿಂದ ಸಮಾವೇಶದ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕುಮಾರಕೃಪ ಅತಿಥಿ ಗೃಹದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ಕೇವಲ ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಲಾಯಿತು. ಬೆಳಗಾವಿ ಲೋಕಸಭೆ ಉಪಚುನಾವಣೆ ದಿನಾಂಕ ಘೋಷಣೆ ನಂತರ ಈ ಬಗ್ಗೆ ಯೋಚನೆ ಮಾಡುತ್ತೇವೆ. ಪ್ರಾಂತ್ಯವಾರು ಕಾರ್ಯಾಧ್ಯಕ್ಷ ಕೊಡಬೇಕು, ಜಾತಿವಾರು ಬೇಡ. ಈ ಹಿನ್ನೆಲೆ ಮಧ್ಯ ಕರ್ನಾಟಕಕ್ಕೆ ಒಂದು ಕಾರ್ಯಾಧ್ಯಕ್ಷ ಸ್ಥಾನ ಬೇಕಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ಸಮುದಾಯದ ಮೇಲೆ ಕೊಡಬಾರದು. ಮಧ್ಯ ಕರ್ನಾಟಕಕ್ಕೆ ಬಂದು ಕಾರ್ಯಾಧ್ಯಕ್ಷ ಸ್ಥಾನ ಕೊಡುವುದು ಬಾಕಿ ಇದೆ. ಆದ್ರೆ ನಾನು ಸಮುದಾಯ ಮೇಲೆ ಕೊಡುವುದು ಬೇಡ ಎಂದು ಹೇಳಿದ್ದೇನೆ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ಟಾಕ್ ವಾರ್ ವಿಚಾರ ಮಾತನಾಡಿ, ಮಾಧ್ಯಮದವರು ಇಬ್ಬರನ್ನೂ ಕೂರಿಸಿ ಪ್ಯಾನಲ್ ಡಿಸ್ಕಷನ್ ಮಾಡಿಸಿ. ಸಮಸ್ಯೆ ಬಗೆಹರಿಯುತ್ತೆ. ಅವರ ಜಗಳದಲ್ಲಿ ನಾನಿಲ್ಲ ಎಂದರು.