ಬೆಂಗಳೂರು : ಸಂಪುಟ ಪುನರ್ ರಚನೆ ವೇಳೆ ಸ್ಥಾನ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿರುವ ಸಚಿವೆ ಶಶಿಕಲಾ ಜೊಲ್ಲೆ ಅವರು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮೂಲಕ ಹೈಕಮಾಂಡ್ಗೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದು, ಈ ಸಂಬಂಧ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇಂದು ಸಂಜೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ದೆಹಲಿಗೆ ತೆರಳುತ್ತಿದ್ದು, ಅದಕ್ಕೂ ಮುನ್ನವೇ ಸಚಿವೆ ಶಶಿಕಲಾ ಜೊಲ್ಲೆ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದಾರೆ. ಸದಾಶಿವನಗರದ ನಿವಾಸಕ್ಕೆ ಪತಿ ಅಣ್ಣಾ ಸಾಹೇಬ ಜೊಲ್ಲೆ ಜೊತೆ ತೆರಳಿ ಕೆಲಕಾಲ ಮಾತುಕತೆ ನಡೆಸಿದರು. ಉಮೇಶ್ ಕತ್ತಿಗೆ ಸಂಪುಟದಲ್ಲಿ ಸ್ಥಾನ ಕೊಡಲು ಬೆಳಗಾವಿಯ ಒಬ್ಬ ಸಚಿವರನ್ನು ಕೈಬಿಡುವ ಚರ್ಚೆ ನಡೆಯುತ್ತಿದೆ. ಇದರಿಂದ ಶಶಿಕಲಾ ಜೊಲ್ಲೆ ತಮ್ಮ ಸ್ಥಾನ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದಾರೆ. ಹೀಗಾಗಿ ಸ್ಥಾನ ಉಳಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ ಎನ್ನಲಾಗ್ತಿದೆ.
ಇತ್ತೀಚೆಗೆ ದೆಹಲಿಗೂ ಭೇಟಿ ಕೊಟ್ಟಿದ್ದ ಶಶಿಕಲಾ ಜೊಲ್ಲೆ, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು. ಇದೀಗ ಮತ್ತೆ ರಮೇಶ್ ಜಾರಕಿಹೊಳಿ ಮೂಲಕ ಕೇಂದ್ರದ ನಾಯಕರ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ದೆಹಲಿಗೆ ತೆರಳಲಿರುವ ಸಚಿವ ರಮೇಶ್ ಜಾರಕಿಹೊಳಿ, ಸೋಮವಾರ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ನೀರಾವರಿ ಯೋಜನೆಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಈ ವೇಳೆ ಕೇಂದ್ರ ಸಚಿವರು ಹಾಗೂ ಕಾನೂನು ತಜ್ಞರನ್ನು ಭೇಟಿ ಮಾಡಲಿದ್ದಾರೆ. ಭೇಟಿ ವೇಳೆ ತಮ್ಮ ಪರ ಮಾತನಾಡಿ ಸಂಪುಟದಿಂದ ಕೈ ಬಿಡದಂತೆ ಕೇಂದ್ರ ನಾಯಕರಿಗೆ ಒತ್ತಡ ಹೇರಲು ದಂಪತಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಸಚಿವ ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಕ್ಷೇತ್ರದ ಮತ್ತು ಇಲಾಖೆ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದೆ. ಈ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ ಎಂದರು.
ಸಂಪುಟದಿಂದ ಕೈಬಿಡುವ ವಿಚಾರ ನನಗೆ ಗೊತ್ತಿಲ್ಲ, ಮಾಧ್ಯಮಗಳಲ್ಲಿ ಮಾತ್ರ ಆ ಸುದ್ದಿ ಗಮನಿಸಿದ್ದೇನೆ. ನಾನು ದೆಹಲಿಗೆ ಹೋಗಿದ್ದು ಆ ವಿಚಾರದ ಬಗ್ಗೆ ಚರ್ಚಿಸಲು ಅಲ್ಲ. ಆ ಬಗ್ಗೆ ದೆಹಲಿಯಲ್ಲೂ ಚರ್ಚೆ ನಡೆದಿಲ್ಲ. ನಾನು ದೆಹಲಿಗೆ ಹೋಗಿದ್ದಾಗಲೇ ಆ ವಿಚಾರ ಸುದ್ದಿಯಾಗಿದ್ದು ಕಾಕತಾಳೀಯ ಎಂದರು. ರಮೇಶ್ ಜಾರಕಿಹೊಳಿ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು, ಕ್ಷೇತ್ರದ ಕಾರ್ಯ ನಿಮಿತ್ತ ಅವರನ್ನು ಭೇಟಿ ಮಾಡಿದ್ದೆ. ಇದಕ್ಕೆ ಬೇರೆ ಅರ್ಥ ಏನೂ ಇಲ್ಲ ಎಂದು ಹೇಳಿದರು.