ಬೆಂಗಳೂರು: ಸರ್ವೋದಯ ದಿನಾಚರಣೆ ಹಿನ್ನೆಲೆ ನಗರದ ಎಂಜಿ ರಸ್ತೆಯಲ್ಲಿರುವ ಗಾಂಧೀಜಿ ಪ್ರತಿಮೆಗೆ ಬಿಬಿಎಂಪಿ ಅಧಿಕಾರಿ ಗೌರವ್ ಗುಪ್ತಾ ಹಾಗೂ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಮಾಲಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಮಂಜುನಾಥ್ ಪ್ರಸಾದ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧೀಜಿಯವರ ಸ್ಮರಣಾರ್ಥ 'ಕುಷ್ಠರೋಗದ ವಿರುದ್ಧ ಅಂತಿಮ ಹೋರಾಟ' ಶೀರ್ಷಿಕೆಯಡಿ ಜಾಗೃತಿ ಆಂದೋಲನ ಜನವರಿ 30ರಿಂದ ಫೆಬ್ರವರಿ 13ರವರೆಗೆ ಹಮ್ಮಿಕೊಳ್ಳಲಾಗಿದೆ. 2016-17ನೇ ಸಾಲಿನಿಂದ ಪಾಲಿಕೆ ವ್ಯಾಪ್ತಿಯಲ್ಲಿ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಅನುಷ್ಠಾನಗೊಂಡಿದೆ.
ಪಾಲಿಕೆ ವ್ಯಾಪ್ತಿಯಲ್ಲಿ 198 ವಾರ್ಡ್ಗಳಿದ್ದು, 141 ಆರೋಗ್ಯ ಕೇಂದ್ರಗಳು, 5 ಸಾರ್ವಜನಿಕ ಆಸ್ಪತ್ರೆಗಳು, 6 ವೈದ್ಯಕೀಯ ಕಾಲೇಜು/ಆಸ್ಪತ್ರೆಗಳು, 2 ಸ್ವಯಂಸೇವಾ ಸಂಸ್ಥೆಗಳು ಸದರಿ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆಂದೋಲನದ ಮೂಲಕ ಜನರನ್ನು ಸಂಪರ್ಕಿಸಿ, ರೋಗದ ಲಕ್ಷಣ ಹಾಗೂ ಚಿಕಿತ್ಸೆ ಕುರಿತು ಅರಿವು ಮೂಡಿಸಲಾಗುತ್ತೆ. ಕುಷ್ಠರೋಗದ ಲಕ್ಷಣಗಳು ಕಂಡುಬಂದರೆ ಕೂಡಲೇ ಪಾಲಿಕೆ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು ಎಂದರು.