ಬೆಂಗಳೂರು: ಆಪರೇಷನ್ ಕಮಲದ ಪ್ರಮುಖ ರೂವಾರಿಯಾಗಿದ್ದ ಎನ್.ಆರ್. ಸಂತೋಷ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದೀಗ 'ಸಿಹಿ' ನೀಡಿದ್ದಾರೆ.
ಸಂತೋಷ್ ಅವರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಸಂತೋಷ್ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಕೆಲವು ರಾಜಕೀಯ ಕಾರಣಗಳಿಂದಾಗಿ ಅದು ಈಡೇರಿರಲಿಲ್ಲ. ಈಗ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲು ಒಪ್ಪಿಗೆ ಸೂಚಿಸಿದ್ದು, ಸದ್ಯದಲ್ಲೇ ಈ ಕುರಿತು ಸರ್ಕಾರಿ ಆದೇಶ ಹೊರ ಬೀಳಲಿದೆ.
ಆಪರೇಷನ್ ಕಮಲದ ವೇಳೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಪಕ್ಷಗಳ ರೆಬೆಲ್ ಶಾಸಕರನ್ನು ಬಿಜೆಪಿಗೆ ಸೆಳೆದು, ಶಾಸಕರ ಮುಂಬೈ ವಾಸದ ಜವಾಬ್ದಾರಿ ನಿಭಾಯಿಸಿದವರಲ್ಲಿ ಸಂತೋಷ ಕೂಡ ಒಬ್ಬರಾಗಿದ್ದರು.