ಬೆಂಗಳೂರು: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ನಗರ ಸಜ್ಜುಗೊಂಡಿದ್ದು, ಪ್ರತಿ ಮಾರಯಕಟ್ಟೆಯಲ್ಲಿ ಜನವೋ ಜನ. ಶಾಪಿಂಗ್ ಸ್ಟ್ರೀಟ್ಗಳು ಕಾಲಿಡಲು ಜಾಗವಿಲ್ಲದಷ್ಟು ಬ್ಯುಸಿಯಾಗಿವೆ. ಇನ್ನು ಸಂಕ್ರಾಂತಿಯ ಕಬ್ಬು, ಎಳ್ಳು, ಬೆಲ್ಲ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ನಾಳೆ ಬೆಲೆ ಹೆಚ್ಚಾಗುವುದರ ಜತೆಗೆ, ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಇಂದಿನಿಂದಲೇ ಜನ ಖರೀದಿಯಲ್ಲಿ ತೊಡಗಿದ್ದಾರೆ.
ಬೆಂಗಳೂರಿನ ಕೆ.ಆರ್ ಮಾರುಕಟ್ಟೆ, ಮಲ್ಲೇಶ್ವರಂ, ಗಾಂಧಿ ಬಜಾರ್, ಬಸವನಗುಡಿ, ಜಯನಗರ, ಜೆಪಿ ನಗರ, ಹೆಬ್ಬಾಳ, ಯಶವಂತಪುರ, ಇಂದಿರಾ ನಗರ ಸೇರಿದಂತೆ ಪ್ರತಿ ವಾರ್ಡ್ಗಳ ಮಟ್ಟದಲ್ಲೂ ಕಬ್ಬು, ಗೆಣಸು, ಕಡಲೆ ಕಾಯಿ, ತರಕಾರಿ, ಹೂವು, ಹಣ್ಣು, ಅರಶಿನ ಗೆಡ್ಡೆ ಮಾರಾಟ ಜೋರಾಗಿದೆ. ಹಬ್ಬದ ಹಿನ್ನೆಲೆ ಹೂವುಗಳ ಬೆಲೆ ಸಾಮಾನ್ಯಕ್ಕಿಂತ ಹೆಚ್ಚಳವಾಗಿದೆ.ಉತ್ತಮ ಮಳೆಯಾಗಿರುವ ಹಿನ್ನೆಲೆ ಮಾರುಕಟ್ಟೆಗೆ ಹೆಚ್ಚು ಬೆಳೆಗಳು ಬಂದಿವೆ. ಎಳ್ಳು, ಬೆಲ್ಲ ಪ್ರತ್ಯೇಕವಾಗಿ, ಅಲ್ಲದೆ ಎಳ್ಳು, ಬೆಲ್ಲ, ಕಾಯಿಯ ಮಿಶ್ರಣವನ್ನೂ ಮಾರಾಟ ಮಾಡಲಾಗುತ್ತಿದೆ.
ಹೀಗಿದೆ ಮಾರುಕಟ್ಟೆ ದರ: ಕಬ್ಬು (ಕೆ.ಜಿ)- 100-120 ರೂ., ಎಳ್ಳು (ಕೆ.ಜಿ) -180 ರೂ., ಸಿಹಿ ಗೆಣಸು- 40ರಿಂದ50 ರೂ., ಹಸಿ ಶೇಂಗಾ-120 ರಿಂದ 140 ರೂ., ಅವರೇ ಕಾಯಿ- 80 ರಿಂದ 100 ರೂ., ಮಾವಿನ ಎಲೆ ಕಟ್ಟು- 20 ರೂ., ಬೇವಿನ ಸೊಪ್ಪು ಕಟ್ಟು- 20 ರೂ., ತುಳಸಿ ತೋರಣ (ಮಾರು)- 50 ರೂ., ಬೆಲ್ಲ- 70 ರಿಂದ 80 ರೂ.,
ಹೂಗಳ ಬೆಲೆ: ಮಲ್ಲಿಗೆ (ಕೆ.ಜಿ) -2000-2200 ರೂ., ಕನಕಾಂಬರ-1200-1500 ರೂ., ಸೇವಂತಿಗೆ- 160-200 ರೂ., ಗುಲಾಬಿ- 250-300 ರೂ., ಸುಗಂಧ ರಾಜ- 160-200 ರೂ., ಚೆಂಡು ಹೂ-110-130 ರೂ., ತಾವರೆ (ಒಂದಕ್ಕೆ)- 20-25 ರೂ.,
ಇದನ್ನೂ ಓದಿ: ಮಕರ ಸಂಕ್ರಾಂತಿ ಸಂಭ್ರಮ... ಹಬ್ಬದ ವಿಶೇಷತೆ ಹೆಚ್ಚಿಸುವ ಆರೋಗ್ಯಕರ ಆಹಾರ ಪದಾರ್ಥಗಳು ಯಾವವು ಗೊತ್ತಾ?
ವಿವಿಧ ರಾಜ್ಯಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಣೆ: ಮಕರ ಸಂಕ್ರಾಂತಿ ಹಬ್ಬವೂ ಸುಗ್ಗಿ ಆರಂಭವನ್ನು ಸೂಚಿಸುತ್ತದೆ. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ವೇಳೆ ಸೂರ್ಯ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಸಂಕ್ರಾಂತಿಯನ್ನು ಭಾರತದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರ ವಿಳಕ್ಕು, ಕರ್ನಾಟಕದಲ್ಲಿ ಎಳ್ಳು- ಬೆಲ್ಲದ ಹಬ್ಬ (ಎಳ್ಳು ಬೀರುವುದು), ಗುಜರಾತ್‌ನಲ್ಲಿ ಉತ್ತರಾಯಣ, ಪಂಜಾಬ್‌ನಲ್ಲಿ ಮಾಘಿ, ಉತ್ತರ ಭಾರತದಲ್ಲಿ ಲೋಹ್ರಿ, ಅಸ್ಸೋಂನಲ್ಲಿ ಮಾಘ ಬಿಹು, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಭೋಗಿ ಎಂಬ ಹೆಸರಲ್ಲಿ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ.
ಕರ್ನಾಟಕದಲ್ಲಿ ಸಂಕ್ರಾಂತಿ ಸಂಭ್ರಮ: ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ವಿಶೇಷ ಹಬ್ಬ. ಕರ್ನಾಟಕದಲ್ಲಿಯೂ ಇದನ್ನು ಸುಗ್ಗಿ ಸಂಭ್ರಮವಾಗಿ ಆಚರಿಸಲಾಗುತ್ತದೆ. ರೈತರು ತಾವು ಬೆಳೆದ ಬೆಳೆ ಕೈಗೆ ಬರುವ ಸಂದರ್ಭದಲ್ಲಿ ಪೂಜೆ ಸಲ್ಲಿಸುವ ಸಾಂಪ್ರದಾಯಿಕ ಆಚರಣೆ ಇದಾಗಿದೆ. ಇಂದು ಇದನ್ನು ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲ, ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ನಗರ, ಪಟ್ಟಣಗಳಲ್ಲಿಯೂ ಆಚರಿಸಲಾಗುತ್ತದೆ.
ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು ಎನ್ನುವುದು ವಿಶೇಷ.
ಉತ್ತರಾಯಣ ಆರಂಭದ ದಿನ: ಇಲ್ಲಿಂದ ಸೂರ್ಯೋದಯ ಇನ್ನು ಆರು ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುತ್ತದೆ. ಉತ್ತರಕ್ಕೆ ಹೆಚ್ಚು ಹೋದಂತೆಲ್ಲಾ ಹಗಲಿನ ಪ್ರಮಾಣ ಹೆಚ್ಚಾಗಿ, ಇರುಳು ಕಡಿಮೆಯಾಗುತ್ತಾ ಹೋಗುತ್ತದೆ. ಸೂರ್ಯನ ತಾಪ ಹೆಚ್ಚಾಗುತ್ತಾ ಬೇಸಿಗೆಯನ್ನು ಅನುಭವಿಸುತ್ತೇವೆ. ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ. ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ.
ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು. ಸೌರಮಾನದ ಪ್ರಕಾರ ಸೂರ್ಯನು ಮೇಷಾದಿ ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಅವುಗಳಲ್ಲಿ ಕರ್ಕಾಟಕ ಸಂಕ್ರಾಂತಿ ಹಾಗೂ ಮಕರ ಸಂಕ್ರಾಂತಿಗಳು ದಕ್ಷಿಣಾಯನ, ಉತ್ತರಾಯಣಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವವುಳ್ಳವುಗಳಾಗಿವೆ. ಸಂಕ್ರಾಂತಿ ಒಂದು ವಿಧದಲ್ಲಿ ಸೂರ್ಯಾರಾಧನೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಸಂಕ್ರಾಂತಿ ಸಂಭ್ರಮ: ಇಲ್ಲಿನ ಆಚರಣೆ ಮತ್ತು ಹಬ್ಬದ ವಿಶೇಷತೆ