ಬೆಂಗಳೂರು: ವಿಧಾನಸೌಧ ಹಾಗೂ ವಿಕಾಸಸೌಧ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಕಾರಣ ಮುಂಜಾಗ್ರತಾ ಕ್ರಮವಾಗಿ ಶಕ್ತಿಸೌಧದಲ್ಲಿ ಇಂದೂ ಕೂಡ ಸ್ಯಾನಿಟೈಸಿಂಗ್ ಕಾರ್ಯ ಮುಂದುವರೆದಿದೆ.
ನಿನ್ನೆ ಸಂಜೆ ವಿಧಾನಸೌಧದ ಪ್ರತಿ ಕೊಠಡಿಗಳು, ಕಾರಿಡಾರ್ ಗಳ ಸ್ಯಾನಿಟೈಸಿಂಗ್ ಕಾರ್ಯ ಆರಂಭವಾಗಿತ್ತು. ಅದರಂತೆ ಇಂದೂ ಸ್ಯಾನಿಟೈಸಿಂಗ್ ಕಾರ್ಯ ಮುಂದುವರಿದಿದೆ. ಗುರುವಾರ ಹಾಗೂ ಶುಕ್ರವಾರ ವಿಕಾಸಸೌಧವನ್ನು ಸಂಪೂರ್ಣವಾಗಿ ಸ್ಯಾನಿಟೈಸಿಂಗ್ ಮಾಡಲಾಗಿತ್ತು. ಇಂದು ವಿಧಾನಸೌಧವನ್ನು ಸಂಪೂರ್ಣವಾಗಿ ಸ್ಯಾನಿಟೈಸಿಂಗ್ ಮಾಡಿ ಶುಚಿಗೊಳಿಸಲಾಗುತ್ತಿದೆ.
ವಿಕಾಸಸೌಧವನ್ನು ಸ್ಯಾನಿಟೈಸ್ ಮಾಡಿದ ಹಿನ್ನೆಲೆ ಶುಕ್ರವಾರ ಒಂದು ದಿನ ಸಂಪೂರ್ಣವಾಗಿ ಮುಚ್ಚಲಾಗಿತ್ತು. ನಾಳೆಯಿಂದ ಶಕ್ತಿಸೌಧದಲ್ಲಿ ಎಂದಿನಂತೆ ಕಾರ್ಯಚಟುವಟಿಕೆ ನಡೆಯಲಿದೆ. ಆದರೆ ಇನ್ನಷ್ಟು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ವಹಿಸಲು ನಿರ್ಧರಿಸಲಾಗಿದೆ.