ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಮೂವರು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ಸಿಸಿಬಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದು ನಿರೂಪಕ ಅಕುಲ್ ಬಾಲಾಜಿ ಮತ್ತು ನಟ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಒಂದು ಗಂಟೆ ಮುಂಚಿತವಾಗಿ ವಿಚಾರಣೆಗೆ ಮಾಜಿ ಶಾಸಕನ ಪುತ್ರ ಯುವರಾಜ್ ಹಾಜರಾಗಿದ್ದಾರೆ. ತದ ನಂತರ ಸಂತೋಷ್ ಕುಮಾರ್, ಕಾರ್ಯಕ್ರಮ ನಿರೂಪಕ ಅಕುಲ್ ಬಾಲಾಜಿ ಕಚೇರಿಗೆ ಹಾಜರಾಗಿದ್ದಾರೆ.
ಕಾರ್ಯಕ್ರಮ ನಿರೂಪಕ ಅಕುಲ್ ಬಾಲಾಜಿ ಮಾತನಾಡಿ, ಹೈದಾರಾಬಾದ್ನಿಂದ ಬರುವಾಗ ಸ್ವಲ್ಪ ತಡವಾಯಿತು, ಸದ್ಯ ವಿಚಾರಣೆಗೆ ಬಂದಿದ್ದೇನೆ. ಇದೊಂದು ಒಳ್ಳೆಯ ಕಾರ್ಯ. ಸಿಸಿಬಿಗೆ ನನ್ನ ಸಾಥ್ ಇದ್ದು, ವಿಚಾರಣೆಗೆ ನಾನು ಸ್ಪಂದಿಸಲಿದ್ದೇನೆ. ಪ್ರತೀಕ್ ಶೆಟ್ಟಿ ಪರಿಚಯವೇ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿ, ಆತ ಯಾರೆಂಬುದು ನನಗೆ ಗೊತ್ತಿಲ್ಲ. ವೈಭವ್ ಜೈನ್ ಪರಿಚಯವಿದ್ದು, ಹಾಯ್ ಬಾಯ್ ಫ್ರೆಂಡ್ ಅಷ್ಟೇ. ದೊಡ್ಡಬಳ್ಳಾಪುರ ರೆಸಾರ್ಟ್ ಸದ್ಯ ನನ್ನ ಹೆಸರಲ್ಲಿ ಇಲ್ಲವೆಂದು ಸ್ಪಷ್ಟನೆ ನಿಡಿದ್ದಾರೆ.
ನಟ ಸಂತೋಷ್ ಕುಮಾರ್ ಮಾತನಾಡಿ, ಸಿಸಿಬಿ ಪೊಲೀಸರ ವಿಚಾರಣೆಗೆ ನಾನು ಸಹಕಾರ ನೀಡುತ್ತೇನೆ. ಸದ್ಯ ಬಂಧಿತ ಆರೋಪಿಗಳ ಪೈಕಿ ಕೆಲವರು ಪರಿಚಯವಿದ್ದು, ಸಂಜನಾ ಸಹ ಪರಿಚಯ ಇದ್ದಾರೆ. ಹಾಗೆಯೇ ಸಂಜನಾ ಬರ್ತ್ ಡೇ ಪಾರ್ಟಿಗೆ ನನ್ನನ್ನು ಆಹ್ವಾನಿಸಿದ ಕಾರಣ ಹೋಗಿದ್ದೆ. ಆ ಪಾರ್ಟಿಯಲ್ಲಿ ರಾಹುಲ್ ಸಹ ಪರಿಚಯವಾಗಿದ್ದು ನಿಜ. ಆತ ಸಹಜವಾಗಿಯೇ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ಅದೇ ಫೋಟೋ ಸದ್ಯ ವೈರಲ್ ಆಗಿದೆ.
ಈಗಾಗಲೇ ಬಂಧನವಾಗಿರುವ ವೈಭವ್ ಜೈನ್ ಕೂಡ ನನಗೆ ಪರಿಚಯ. ನನಗೂ ಆತನಿಗೂ ಜಗಳ ಸಹ ಆಗಿತ್ತು. ಜನವರಿ 14ರಿಂದ ಆತನ ಜೊತೆಗೆ ನಾನು ಸಂಪರ್ಕ ಕೈಬಿಟ್ಟಿದ್ದೀನಿ. ಆತ ಡ್ರಗ್ಸ್ ಪೆಡ್ಲರ್ ಅಥವಾ ಮತ್ತಿನ್ನೇನೋ ಎಂಬುದು ನನಗೆ ತಿಳಿದಿಲ್ಲ. ಒಂದು ವೇಳೆ ನನಗೆ ತಿಳಿದಿದ್ರೆ ನಾನೇ ಕಪಾಳಕ್ಕೆ ಬಾರಿಸುತ್ತಿದ್ದೆ. ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣವಾಗಬೇಕು ಎಂದರು. ಲಾಕ್ಡೌನ್ ಸಂದರ್ಭದಲ್ಲಿ ನಾನು ಯಾವುದೇ ಪಾರ್ಟಿಯಲ್ಲಿ ಭಾಗಿಯಾಗಿಲ್ಲ. ನಾನು ನನ್ನ ಬಳಿ ಇದ್ದ ದಾಖಲೆಗಳೊಂದಿಗೆ ತನಿಖೆ ಎದುರಿಸಲಿದ್ದೇನೆ. ನಾವೆಲ್ಲಾ ಕನ್ನಡ ಕಲಾವಿದರು. ದಯವಿಟ್ಟು ಹಿಂಬಾಲಿಸುವುದು ಬೇಡ ಎಂದು ಮನವಿ ಮಾಡಿದರು.