ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ರಾಜ್ಗಾಗಿ ಸಿಸಿಬಿ ಪೊಲೀಸರು ತಂಡ ತಂಡವಾಗಿ ಶೋಧ ಕಾರ್ಯ ಕೈಗೊಂಡಿದ್ದರರೂ ಅವರ ಸುಳಿವು ಮಾತ್ರ ಸಿಗುತ್ತಿಲ್ಲ.
ಸಂಪತ್ ರಾಜ್ ಸಿಸಿಬಿ ಬಲೆಗೆ ಬೀಳದೇ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಮತ್ತೊಂದೆಡೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಸಂಪತ್ ರಾಜ್ನನ್ನು ಆದಷ್ಟು ಬೇಗ ಬಂಧಿಸುವಂತೆ ತನಿಖಾ ತಂಡಕ್ಕೆ ಸೂಚಿಸಿದ್ದಾರೆ.
ಸಿಸಿಬಿ ಪೊಲೀಸರು ಟೆಕ್ನಿಕಲ್ ಆಧಾರದ ಮೇರೆಗೆ ತನಿಖೆಗೆ ಮುಂದಾಗಿದ್ರು ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಾರಣ, ಸಂಪತ್ ಯಾವುದೇ ಮೊಬೈಲ್ ಬಳಸುತ್ತಿಲ್ಲ ಮತ್ತು ತನ್ನ ಬ್ಯಾಂಕ್ ಖಾತೆಯಿಂದ ಹಣ ಪಡೆಯುವುದಾಗಲಿ ಅಥವಾ ಇನ್ಯಾವುದೇ ವ್ಯವಹಾರ ಕೂಡ ಮಾಡದೇ ಇರುವುದು ಪತ್ತೆ ಕಾರ್ಯಕ್ಕೆ ಅಡ್ಡಿಯಾಗಿದೆ ಎನ್ನಲಾಗ್ತಿದೆ.
ಈಗಾಗಲೇ ಗಲಭೆ ಪ್ರಕರಣ ಸಂಬಂಧ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಿರುವ, ಅದರಲ್ಲಿ ಸ್ಪಷ್ಟವಾಗಿ ಸಂಪತ್ ರಾಜ್ ಪಾತ್ರದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಹೀಗಾಗಿ ಸಂಪತ್ನನ್ನು ಬಂಧಿಸಿ ವಿಚಾರಣೆ ನಡೆಸೋದು ಅನಿವಾರ್ಯವಾಗಿದೆ.
ಸಂಪತ್ ತಲೆಮರೆಸಿಕೊಂಡಿರುವ ಕಾರಣ ತನ್ನ ಖರ್ಚಿಗೆ, ಊಟಕ್ಕೆ, ವಾಸ್ತವ್ಯಕ್ಕೆ ಹಣದ ಅವಶ್ಯಕತೆ ಬಹಳಷ್ಟು ಇದೆ. ಇದಕ್ಕೆ ಕಾಂಗ್ರೆಸ್ನ ಪ್ರಭಾವಿ ವ್ಯಕ್ತಿವೋರ್ವ ಸಹಾಯ ಮಾಡುತ್ತಿರುವ ಮಾಹಿತಿ ಸಿಸಿಬಿಗೆ ಸಿಕ್ಕಿದೆ ಎಂದು ಹೇಳಲಾಗ್ತಿದೆ. ಸದ್ಯ ಆ ಆಧಾರದಲ್ಲಿ ಕೂಡ ಸಿಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಸಂಪತ್ ಜೊತೆ ಕಾರ್ಪೊರೇಟರ್ ಜಾಕಿರ್ ಹುಸೇನ್ ನಾಪತ್ತೆಯಾಗಿರುವ ಕಾರಣ ಆತನ ಶೋಧ ಕಾರ್ಯ ಕೂಡ ಆರಂಭವಾಗಿದೆ.
ಹಿನ್ನೆಲೆ: ಪುಲಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ವಿರುದ್ಧ ಕಾಂಗ್ರೆಸ್ಸಿಗರ ರಾಜಕೀಯ ದ್ವೇಷದ ಹಿನ್ನೆಲೆ ಅಖಂಡ ಶ್ರೀನಿವಾಸ್ ಮೂರ್ತಿಯನ್ನು ರಾಜಕೀಯದಿಂದ ಕೆಳಗಿಳಿಸುವ ಸಲುವಾಗಿ ದೊಡ್ಡ ಮಟ್ಟದ ಗಲಭೆ ನಡೆದಿತ್ತು. ಪ್ರಕರಣದ ತನಿಖೆ ಚುರುಕುಗೊಂಡ ನಂತರ ಮಾಜಿ ಮೇಯರ್ ಸಂಪತ್ ರಾಜ್ ಬಂಧನ ಭೀತಿಯಿಂದ ಖಾಸಗಿ ಆಸ್ಪತ್ರೆಗೆ ಕೊರೊನಾ ನೆಪ ಹೇಳಿ ದಾಖಲಾಗಿದ್ದರು. ನಂತರ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.