ಬೆಂಗಳೂರು: ವಿದ್ಯಾರ್ಥಿಗಳದ್ದು ಆದರ್ಶ ಜೀವನ, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಬೇಕು. ಜೀವನದಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಗಟ್ಟಿ ಮನಸ್ಸು ಹೊಂದಿರಬೇಕೆಂದು ಭಾರತ ರತ್ನ ಪ್ರೊ. ಸಿ ಎನ್ ಆರ್ ರಾವ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇಂದು ಮಹಾರಾಣಿ ಲಕ್ಷ್ಮೀ ಅಮ್ಮಣಿ ಕಾಲೇಜಿನಲ್ಲಿ ಸಮಗತಾ-2019 ಎಂಬ ಎರಡು ದಿನದ ಸೈನ್ಸ್ ಫೆಸ್ಟ್ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮೆಂಡೆಲಿವ್ಸ್ ಗ್ರೂಪ್ ಆ್ಯಂಡ್ ಪಿರಿಯಡ್ಸ್ ನೇಚರ್ ಟು ನೇಚರ್ ವಿಷಯ ಕುರಿತ ಉಪನ್ಯಾಸ ನೀಡಿದ ಅವರು, ವಿದ್ಯಾರ್ಥಿಗಳು ಕೊನೆ ಕ್ಷಣದವರೆಗೂ ಛಲ ಹೊಂದಿರಬೇಕು. ಸಂಶೋಧನೆಯ ಗುಣ ಹೆಚ್ಚಬೇಕೆಂದು ಸ್ಪೂರ್ತಿ ತುಂಬಿದರು.
ಯಾವುದೇ ದೇಶದಲ್ಲಿ ಆವಿಷ್ಕಾರ, ಅನ್ವೇಷಣೆ ಇಲ್ಲದೇ ಹೊಸ ನಾಯಕತ್ವದ ಪಡೆ ಹುಟ್ಟುವುದಿಲ್ಲ. ಅಮೆರಿಕವು ತಂತ್ರಜ್ಞಾನ ಮತ್ತು ವಿಜ್ಞಾನಕ್ಕೆ ಹೆಚ್ಚು ಒತ್ತು ಕೊಟ್ಟ ಪರಿಣಾಮವೇ ಇಂದು ಸಂಶೋಧನೆ ಮತ್ತು ಆವಿಷ್ಕಾರದಲ್ಲಿ ಮೊದಲ ಸ್ಥಾನ ಗಳಿಸಿದೆ. ಇಂದಿನ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿಯೂ ವಿಜ್ಞಾನವನ್ನು ಅಪಾರವಾಗಿ ಕಲಿಸಬೇಕಾದ ಅಗತ್ಯವಿದೆಯೆಂದರು. ಈ ಎರಡು ದಿನದ ಸೈನ್ಸ್ ಫೆಸ್ಟ್ನಲ್ಲಿ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಪೋಸ್ಟರ್ ಪ್ರೆಸೆಂಟೇಷನ್ ಮತ್ತು ರಸ ಪ್ರಶ್ನೆ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿದೆ.