ಬೆಂಗಳೂರು : ಕಾಂಗ್ರೆಸ್ ಪಕ್ಷ ಸೇರಲು ಸಾಕಷ್ಟು ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ. ಊಹೆ ಮಾಡಲು ಸಾಧ್ಯವಿಲ್ಲದಷ್ಟು ಬಿಜೆಪಿ ನಾಯಕರು, ಜನ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿದ್ದಾರೆ. ಯಾರೇ ಪಕ್ಷ ಸೇರುವುದಿದ್ದರೂ ಮೊದಲು ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಬೇಕು. ನಂತರ ಅಲ್ಲಂ ವೀರಭದ್ರ ಕಮಿಟಿ ಕ್ಲಿಯರ್ ಮಾಡಿದ್ರೆ ಮಾತ್ರ ಸೇರಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಧಾರವಾಡ ಎಂಎಲ್ಸಿ ಸ್ಥಾನ ಗೆಲ್ಲಲು ಕಾರಣವಾದ ಕಾರ್ಯಕರ್ತರು, ಮುಖಂಡರು, ಮತದಾರರಿಗೆ ಧನ್ಯವಾದ ಸಲ್ಲಿಸಿ ಅವರು ಮಾತನಾಡಿದರು. ಧಾರವಾಡ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಮತದಿಂದ ಗೆಲ್ಲಿಸಿದ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ಕೃತಜ್ಞತೆ. ಈ ಚುನಾವಣೆ ಬಹಳ ಮಹತ್ವದ ಚುನಾವಣೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತದ, ಕಾರ್ಯಕರ್ತರ ಗೆಲುವು. ಹಾಗೆಯೇ, ಬಿಜೆಪಿಯ ವೈಫಲ್ಯತೆ, ಭ್ರಷ್ಠಾಚಾರದ ವಿರುದ್ಧದ ಗೆಲುವು ಎಂದರು.
ಪಂಚಾಯತ್ ವ್ಯವಸ್ಥೆ ಗಟ್ಟಿಗೊಳಿಸುತ್ತೇನೆ. ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ಪ್ರಯತ್ನ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು. ರಾಜ್ಯದಲ್ಲಿ 11 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ. 2ರಲ್ಲಿ ಕಡಿಮೆ ಅಂತರದಲ್ಲಿ ಸೋಲಾಗಿದೆ. ವೋಟ್ ಶೇರ್ನಲ್ಲಿ ಕಾಂಗ್ರೆಸ್ಗೆ 48%, ಬಿಜೆಪಿ 41% ಗೆಲುವು ಸಾಧಿಸಿದೆ. ಇದು ಮುಂದಿನ ಚುನಾವಣೆಗೆ ದಿಕ್ಸೂಚಿ. ಕಾಂಗ್ರೆಸ್ ಮುಂದಿನ ಚುನಾವಣೆಗಳಲ್ಲಿ ಗೆಲ್ಲಲಿದೆ. ಅಧಿಕಾರಕ್ಕೆ ಬರಲಿದೆ ಎಂಬುದಕ್ಕೆ ಇದು ದಿಕ್ಸೂಚಿ ಎಂದು ತಿಳಿಸಿದರು.
ಪೆಟ್ರೋಲ್ ಬೆಲೆ, ಡೀಸೆಲ್ ಬೆಲೆ, ಗ್ಯಾಸ್ ಬೆಲೆ ಹೆಚ್ಚಿಸಿದ್ದಕ್ಕೆ ಕಪ್ಪುಹಣ ವಾಪಸ್, ಯುವಜನರಿಗೆ ಉದ್ಯೋಗ, ಕೊರೊನಾ ಓಡಿಸ್ತೇನೆ ಅಂದ ಪ್ರಧಾನಿ ಮೋದಿಯವರ ಸುಳ್ಳಿಗೆ ವೋಟ್ ಹಾಕ್ಬೇಕಾ?. 40% ಕಮಿಷನ್ ಕೇಳ್ತಾರೆ ಎಂದು ಗುತ್ತಿಗೆದಾರರು ಪತ್ರ ಬರೀತಾರೆ. ಇದು ಇತಿಹಾಸದಲ್ಲೇ ಇದೇ ಮೊದಲು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಸಚಿವ ಭೈರತಿ ಬಸವರಾಜ್ ಭೂಹಗರಣ ಮಾಡಿದ್ದಾರೆ. ಕೂಡಲೇ ರಾಜೀನಾಮೆ ಕೊಡಬೇಕು. ಇದು ಭ್ರಷ್ಟ ಜನತಾ ಪಾರ್ಟಿ, ಭಾರತೀಯ ಜನತಾ ಪಾರ್ಟಿ ಅಲ್ಲ ಎಂದರು. ಜೊತೆಗೆ ಸಿಎಂ ಬದಲಾವಣೆ ಸಾಧ್ಯತೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸರ್ಕಾರ ನೇರವಾಗಿ ಆಯ್ಕೆಯಾದ ಸರ್ಕಾರ ಅಲ್ಲ. ಆಪರೇಷನ್ ಕಮಲ ಮಾಡಿ, ನಮ್ಮ ಶಾಸಕರನ್ನು ಖರೀದಿ ಮಾಡಿದ ಸರ್ಕಾರ, ಯಾವ್ಯಾವಾಗ ಯಾವುದು ಬದಲಾವಣೆ ಆಗುತ್ತೆ ಅಂತಾ ಗೊತ್ತಾಗುವುದಿಲ್ಲ. ಜನರು ಭ್ರಮನಿರಸನರಾಗಿದ್ದಾರೆ. ಜನರು ಕಾಂಗ್ರೆಸ್ ಸರ್ಕಾರ ಬಯಸುತ್ತಿದ್ದಾರೆ ಎಂದರು.
ಬೆಳಗಾವಿಯಲ್ಲಿ ಪುಂಡಾಟಿಕೆ ಮಾಡುತ್ತಿರುವ ಕಿಡಿಗೇಡಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಆಗ್ಬೇಕು. ಇದು ಇಂಟಲಿಜೆನ್ಸಿ ಫೈಲ್ಯೂರ್. ಇದನ್ನು ಕಾಂಗ್ರೆಸ್ ಮಾಡಿಸುತ್ತಿದೆ ಎಂಬ ರಾಮುಲು ಅವರದ್ದು ಬಾಲಿಷ ಹೇಳಿಕೆ. ಅವರು ಸಿಎಂ ಕೂಡ ಅಲ್ಲ, ಗೃಹಸಚಿವರೂ ಅಲ್ಲ. ಅವರ ಕೆಲಸ ಅವರು ನಿಭಾಯಿಸಲಿ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ನಡೆದಿದೆ. ಪದಾಧಿಕಾರಿಗಳ ಪಟ್ಟಿ ಅಂತಿಮವಾಗಿದೆ. ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ. ಸದ್ಯ ಮಾಜಿ ಪದಾಧಿಕಾರಿಗಳೇ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಜೊತೆಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ವೋಟ್‌ಗಳನ್ನು ಲಕ್ಷಾಂತರ ರೂ. ಖರ್ಚು ಮಾಡಿ ಖರೀದಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಿದೆ ಎಂದು ಅಭಿಪ್ರಾಯಪಟ್ಟರು.
ಓದಿ: ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸರಿಗಮಪ ಖ್ಯಾತಿಯ ರತ್ನಮ್ಮ, ಮಂಜಮ್ಮ ಸಹೋದರಿಯರು