ಬೆಂಗಳೂರು: ನವರಾತ್ರಿ ಹಬ್ಬದ ಸಂಭ್ರಮ ಉದ್ಯಾನ ನಗರಿಯಲ್ಲಿ ಕಳೆಗಟ್ಟಿದೆ. ನಗರದ ಗಲ್ಲಿ,ಗಲ್ಲಿಯಲ್ಲೂ ಗೊಂಬೆಗಳ ಮಾರಾಟ ನಡೆಯುತ್ತಿದ್ದು ಜನರು ದಸರಾ ಗೊಂಬೆಗಳನ್ನು ಖರೀದಿಸುತ್ತಿರುವ ದೃಶ್ಯ ಕಂಡುಬಂತು.
ಈ ಸಲ ವಿಶೇಷವಾಗಿ ಮೈಸೂರು ಭಾಗದ ಹಲವು ಸನ್ನಿವೇಶದ ಗೊಂಬೆಗಳು ಹಾಗೂ ಪಟ್ಟದ ಗೊಂಬೆ, ಮದುವೆ ಮನೆಯಲ್ಲಿ ನಡೆಯುವ ಶಾಸ್ತ್ರಗಳ ಗೊಂಬೆ.. ಹೀಗೆ ನೂರಕ್ಕೂ ಹೆಚ್ಚು ಪರಿಕಲ್ಪನೆಯ ಗೊಂಬೆಗಳ ಮಾರಾಟ ನಡೆಯುತ್ತಿದೆ. ಚೆನ್ನಪಟ್ಟಣದಿಂದ ಹಿಡಿದು ಅಸ್ಸಾಂ, ತಮಿಳುನಾಡು, ಆಂಧ್ರ, ಗುಜರಾತ್ ಹಾಗು ಕೊಲ್ಕತ್ತಾ ಸೇರಿದಂತೆ ಬೇರೆ ಬೇರೆ ರಾಜ್ಯದಿಂದ ಗೊಂಬೆಗಳನ್ನು ತರಿಸಲಾಗಿದೆ.
'ಪ್ರತಿ ವರ್ಷ ಗ್ರಾಹಕರ ನಿರೀಕ್ಷೆಯಂತೆ ಹೊಸ ಹೊಸ ಗೊಂಬೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಕಳೆದೊಂದು ವಾರದಿಂದ ಪ್ರದರ್ಶನ ನಡೆಯುತ್ತಿದ್ದು, ದಸರಾ ವೈಭವಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಜನರು ಗೊಂಬೆಗಳ ಖರೀದಿಗೆ ಬರುತ್ತಾರೋ, ಇಲ್ಲವೋ ಎಂದು ಭಾವಿಸಿದ್ದೆವು. ಆದರೆ, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ' ಎಂದು ವರ್ಣ ಸ್ಟೋರ್ ಮಾಲೀಕ ಅರುಣ್ ತಿಳಿಸಿದರು.