ಬೆಂಗಳೂರು: ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಒಂದು ವರ್ಷದ ಕಡ್ಡಾಯ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ವೇತನ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್, ಅರ್ಜಿಗೆ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.
ಈ ಕುರಿತು ವೈದ್ಯ ಸುಹಾಸ್ ಮುರಳಿ ಸೇರಿದಂತೆ ಐದು ಮಂದಿ ವೈದ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಪೀಠ, ಈ ನಿರ್ದೇಶನ ನೀಡಿದೆ. ಪ್ರತಿವಾದಿಗಳಾದ ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯಕ್ಕೆ ಎರಡು ವಾರಗಳಲ್ಲಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿದೆ.
ಅರ್ಜಿದಾರರ ಕೋರಿಕೆ: ಅರ್ಜಿದಾರರು ತಾವು 2019ರಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ ಪೂರೈಸಿ ಸರ್ಕಾರದ ನಿಯಮಗಳ ಪ್ರಕಾರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಒಂದು ವರ್ಷ ಕಡ್ಡಾಯ ಸೇವೆಗೆ ನಿಯೋಜನೆಗೊಂಡಿದ್ದೇವೆ. ಇದಕ್ಕೆ ಸರ್ಕಾರ ತಮಗೆ 55 ಸಾವಿರ ರೂಪಾಯಿ ಮಾಸಿಕ ವೇತನ ನಿಗದಿಪಡಿಸಿದೆ. ಆದರೆ ಇದೇ ವೇಳೆ ಮತ್ತೋರ್ವ ಸಹೋದ್ಯೋಗಿಗೆ ಮಾಸಿಕ 80 ಸಾವಿರ ರೂಪಾಯಿ ವೇತನ ನೀಡುತ್ತಿದೆ. ಈ ರೀತಿಯ ವೇತನ ತಾರತಮ್ಯ ಕಡ್ಡಾಯ ಗ್ರಾಮೀಣ ಸೇವೆಗೆ ಮುಂದಾಗಿರುವ ವೈದ್ಯರನ್ನು ನಿರುತ್ಸಾಹಗೊಳಿಸಲಿದೆ. ಆದ್ದರಿಂದ ಕಡ್ಡಾಯ ಸೇವೆಗೆ ನಿಯೋಜನೆಗೊಂಡಿರುವ ಎಲ್ಲರಿಗೂ ಸಮಾನ ವೇತನ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.