ಬೆಂಗಳೂರು: ಕಳೆದೊಂದು ವಾರದಿಂದ ಬೀಳುತ್ತಿರುವ ಭೀಕರ ಮಳೆಯಿಂದಾಗಿ ಉತ್ತರ ಕರ್ನಾಟಕ ತತ್ತರಿಸಿ ಹೋಗಿದ್ದು, ಜಲಪ್ರಳಯದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ನೆರವಿಗೆ ನಟ ದುನಿಯಾ ವಿಜಯ್ ನಿರ್ದೇಶನದ ಸಲಗ ಚಿತ್ರತಂಡ ಮುಂದಾಗಿದ್ದು, ಐದಾರು ಟ್ರಕ್ಗಳಲ್ಲಿ ಉತ್ತರ ಕರ್ನಾಟಕದ ಜೊತೆ ನಂಜನಗೂಡು ಹಾಗೂ ಕೊಳ್ಳೇಗಾಲ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿರುವುದಾಗಿ ನಟ ವಿಜಯ್ ತಿಳಿಸಿದ್ದಾರೆ.
ಚಿತ್ರತಂಡ ಸುಮಾರು ಐದಾರು ಟ್ರಕ್ಗಳಲ್ಲಿ ಸಂತ್ರಸ್ತರಿಗಾಗಿ ಅಗತ್ಯ ಸಾಮಾಗ್ರಿಗಳನ್ನ ತುಂಬಿಸಿ ಉತ್ತರ ಕರ್ನಾಟಕ್ಕೆ ಕಳುಹಿಸಿದ್ದಾರೆ. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಟ ದುನಿಯಾ ವಿಜಯ್, ಭೀಕರ ಮಳೆಗೆ ನಮ್ಮ ಕರ್ನಾಟಕದ ಬಹುತೇಕ ಜಿಲ್ಲೆಗಳು ತತ್ತರಿಸಿವೆ. ಅಲ್ಲದೇ, ಬಹುತೇಕ ಜನರು ಮನೆ,ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ಹಾಗಾಗಿ ಅಲ್ಲಿನ ಸಂತ್ರಸ್ತರಿಗೆ ಬೇಕಾದಂತಹ ಅಗತ್ಯ ಸಾಮಾಗ್ರಿಗಳನ್ನ ತುಂಬಿಸಿ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಕಳುಹಿಸಿದ್ದೇವೆ.ಇನ್ನೂ, ನೆಲಮಂಗಲದಿಂದ ಹಸುಗಳಿಗಾಗಿ ಹುಲ್ಲುನ್ನು ಕಳುಹಿಸಿದ್ದೇವೆ. ಉತ್ತರ ಕರ್ನಾಟಕದ ಜೊತೆ ನಂಜನಗೂಡು ಹಾಗೂ ಕೊಳ್ಳೇಗಾಲಕ್ಕೂ ಪರಿಹಾರ ಸಾಮಗ್ರಿಗಳನ್ನು ಕಳಿಸುತ್ತಿರುವ ನಟ ದುನಿಯಾ ವಿಜಯ್ ತಿಳಿಸಿದರು.
ಸಲಗ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಇರುವ ಕಾರಣ ನೆರೆಹಾನಿ ಪ್ರದೇಶಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ನೆರೆ ಸಂತ್ರಸ್ತರ ನೆರವಿಗೆ ಈಗಾಗಲೇ ಮ್ಮ ತಂಡದ ಬಹುತೇಕ ಹುಡುಗರುಗಳು ಕೆಲಸ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳು ನಿರಾಶ್ರಿತರಿಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತೇವೆ. ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಯಾವುದಾದರೂ ಒಂದು ಪುಟ್ಟ ಹಳ್ಳಿಯನ್ನು ನಮ್ಮ ಕೈಲಾದ ಮಟ್ಟಿಗೆ ಅಭಿವೃದ್ಧಿ ಮಾಡುವ ಕೆಲಸಕ್ಕೆ ಸಲಗ ಚಿತ್ರತಂಡ ಮುಂದಾಗಲಿದೆ ಎಂದರು.
ಇದೇ ವೇಳೆ ಮಾತನಾಡಿದ ನಿರ್ಮಾಪಕ ಶ್ರೀಕಾಂತ್ ವೀರ, ಸಂತ್ರಸ್ತರಿಗೆ ನೆರವಾಗಲೇ ಬೇಕು ಎಂಬ ಉದ್ದೇಶದಿಂದ ನಟ ವಿಜಯ್ ಅವರು ಕಳೆದ ಒಂದು ವಾರದಿಂದ ಅವರೇ ಮುಂದೆ ನಿಂತು ಎಲ್ಲ ಕಾರ್ಯವನ್ನು ಮಾಡಿದ್ದಾರೆ. ಅಲ್ಲದೇ, ಸಂತ್ರಸ್ತರಿಗೆ ಯಾವ ವಸ್ತುಗಳು ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಎರಡು ದಿನ ಮುಂಚೆ ನಮ್ಮ ಒಂದು ತಂಡವನ್ನು ಅಲ್ಲಿಗೆ ಕಳುಹಿಸಿ,ಅಲ್ಲಿನ ಮಾಹಿತಿ ಸಂಗ್ರಹಿಸಿ ನಂತರ ಉತ್ತರ ಅಗತ್ಯ ಸಾಮಗ್ರಿಗಳನ್ನು ಕಳಿಸುತ್ತಿದ್ದೇವೆ ಎಂದರು.