ಬೆಂಗಳೂರು: ನಗರದ ಹೊರಮಾವು ವಾರ್ಡ್ನ ಸಾಯಿ ಬಡಾವಣೆಯಲ್ಲಿ ಪ್ರತಿ ಬಾರಿ ಮಳೆಯಾದಾಗಲೂ ಅವಾಂತರ ಸೃಷ್ಟಿ ಆಗುತ್ತಿದೆ. ನಿನ್ನೆ ಸಂಜೆಯಿಂದ ಸುರಿದ ಧಾರಾಕಾರ ಮಳೆಗೆ 250ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದು ನಿವಾಸಿಗಳು ಪರದಾಟ ಅನುಭವಿಸಿದರು.
ಸಚಿವ ಬೈರತಿ ಬಸವರಾಜ್ ಅವರು ಸಾಯಿ ಲೇಔಟ್ಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡುತ್ತಾ, ಬಡಾವಣೆಯಲ್ಲಿ ಮಳೆ ನೀರು ತುಂಬಿಕೊಂಡಿದ್ದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾನು ಕ್ಷಮೆ ಕೋರುತ್ತೇನೆ. ಸರ್ಕಾರ ಈಗಾಗಲೇ 17 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಮಳೆ ಕಡಿಮೆ ಆದ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು. ಕಳೆದ ಬಾರಿ ಸಾಕಷ್ಟು ಜನರಿಗೆ ಪರಿಹಾರದ ಹಣ ನೀಡಲಾಗಿದೆ. ಸರಿಯಾಗಿ ಫೋಟೋಗಳನ್ನು ಅಪ್ಲೋಡ್ ಮಾಡದ ಕಾರಣ ಕೆಲವರಿಗೆ ಪರಿಹಾರ ಸಿಕ್ಕಿಲ್ಲ ಎಂದರು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ತನಿಖಾ ವಿವರ ಬಹಿರಂಗಪಡಿಸಲು ಸಿಎಂ ನಕಾರ
ಮಳೆ ಬಂದಾಗಲೆಲ್ಲ ವರ್ಷದಲ್ಲಿ ಮೂರ್ನಾಲ್ಕು ಬಾರಿ ಹೊರಮಾವಿನ ಸಾಯಿ ಲೇಔಟ್ ಸಂಪೂರ್ಣವಾಗಿ ಜಲಾವೃತವಾಗುತ್ತಿದೆ. ಎರಡು ತಿಂಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಬೈರತಿ ಬಸವರಾಜ್ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಎರಡು ತಿಂಗಳಾದರೂ ಸಹ ಇನ್ನೂ ಬಗೆಹರಿದಿಲ್ಲ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿವಾಸಿಗಳಿಗೆ ಊಟ ನೀರಿನ ವ್ಯವಸ್ಥೆ: ಸಾಯಿ ಬಡಾವಣೆಯಲ್ಲಿ ಮೂರು- ನಾಲ್ಕು ಅಡಿ ನೀರು ತುಂಬಿರುವ ಕಾರಣ, ಜನ ಊಟ -ನೀರು ಇಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಸಂದರ್ಭದಲ್ಲಿ ಜನರಿಗೆ ಟ್ರ್ಯಾಕ್ಟರ್ ಮೂಲಕ ಊಟ, ನೀರು ತಂದು ವಿತರಿಸಲಾಗಿದೆ.