ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ಕಟ್ಟಿಸಲಾಗುತ್ತಿರುವ ಸುಮಾರು 8 ಸಾವಿರ ಶಾಲಾ ಕೊಠಡಿಗಳಿಗೆ ವಿವೇಕ ಎಂದು ಹೆಸರಿಡುವ ಹಾಗೂ ಅದೇ ಕಾಲಕ್ಕೆ ಅವುಗಳಿಗೆ ಕೇಸರಿ ಬಣ್ಣ ಹಚ್ಚುವ ಸರ್ಕಾರದ ನಿರ್ಧಾರ ಈಗ ವಿವಾದಕ್ಕೀಡಾಗಿದೆ.
ಈ ಮಧ್ಯೆ ಗದುಗಿನಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ‘ಕೇಸರಿ ಕೂಡ ಬಣ್ಣವಲ್ಲವೇ? ಆ ಬಣ್ಣ ಚೆನ್ನಾಗಿರುತ್ತದೆ ಅಂತ ಆರ್ಕಿಟೆಕ್ಟ್ ಹೇಳಿದರೆ ಶಾಲೆ ಗೋಡೆಗಳಿಗೆ ಕೇಸರಿ ಬಣ್ಣವನ್ನೇ ಬಳಿಸಲಾಗುವುದು. ಬಣ್ಣ, ಕಿಟಕಿ, ಬಾಗಿಲುಗಳ ವಿನ್ಯಾಸದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ’ ಎಂದರು.
ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಕೇಸರಿ ಬಣ್ಣ ಬಳಿಯುವ ವಿಷಯವನ್ನು ಬಲವಾಗಿಯೇ ಸಮರ್ಥನೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ಗೆ ಕೇಸರಿ ಬಣ್ಣ ಕಂಡರೆ ಯಾಕೆ ಅಲರ್ಜಿ ಎಂದು ಕಿಡಿಕಾರಿದ್ದಾರೆ.
ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುತ್ತಿರುವ ಬಗ್ಗೆ ಕಾಂಗ್ರೆಸ್ ವಿರೋಧದ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಕೇಸರಿ ಬಣ್ಣ ಭಾರತದ ಧ್ವಜದಲ್ಲಿಯೇ ಇದೆ. ಕೇಸರಿ ಕಂಡರೆ ಏಕೆ ಸಿಟ್ಟು? ಸ್ವಾಮಿ ವಿವೇಕಾನಂದರ ಹೆಸರಿನಲ್ಲಿಯೇ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, ಅವರೊಬ್ಬ ಸನ್ಯಾಸಿ. ಅವರು ತೊಟ್ಟಿದ್ದು ಕೇಸರಿ ಬಣ್ಣದ ಕಾವಿ. ವಿವೇಕ ಎಂದರೆ ಎಲ್ಲರಿಗೂ ಜ್ಞಾನ, ಅದನ್ನು ಕಲಿಯಲಿ ಎಂದರು.
ಕೊಠಡಿಗಳಿಗೆ ವಿವೇಕಾನಂದರ ಹೆಸರಿಡುತ್ತಿರುವುದಾಗಿ ಸರ್ಕಾರ ಹೇಳಿಕೊಳ್ಳಬಹುದು. ಆದರೆ ವಿವೇಕಾನಂದರು ಧರಿಸುತ್ತಿದ್ದ ಕೇಸರಿ ಬಟ್ಟೆಯ ಬಣ್ಣವನ್ನೇ ಕೊಠಡಿಯೊಳಗಡೆ ಹಚ್ಚುವ ನಿರ್ಧಾರ ಮಾತ್ರ ಪ್ರತಿಪಕ್ಷಗಳನ್ನು ಕೆರಳಿಸಿದೆ. ಕೇಸರಿ ಬಣ್ಣ ಬಿಜೆಪಿ ಸಿದ್ಧಾಂತದ ಪರ್ಯಾಯವೇ ಆಗಿರುವುದರಿಂದ ಈ ವಿಚಾರ ತಕ್ಷಣದಲ್ಲೇ ಮತ್ತೊಂದು ರಾಜಕೀಯ ಹಾಗೂ ಧಾರ್ಮಿಕ ವಿವಾದವಾಗುವ ಎಲ್ಲ ಲಕ್ಷಣಗಳೂ ಇವೆ.
ಇದನ್ನೂ ಓದಿ: ಶಾಲೆಗಳಿಗೆ ಕೇಸರಿ ಬಣ್ಣ: ಎಲ್ಲದರಲ್ಲೂ ರಾಜಕಾರಣ ಸಲ್ಲದು ಎಂದ ಸಿಎಂ ಬೊಮ್ಮಾಯಿ