ಬೆಂಗಳೂರು: ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತಾಡಲು ಇಷ್ಟಪಡಲ್ಲ ಆದರೆ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಗ್ಗೆ ಉಗ್ರಪ್ಪ ಮತ್ತು ಸಲೀಂ ಮಾತುಕತೆ ವಿಚಾರವನ್ನು ಸ್ವತಂತ್ರ ಏಜೆನ್ಸಿಯಿಂದ ತನಿಖೆ ಮಾಡಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದಗೌಡ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ ಬಗ್ಗೆ ಅವರ ಪಕ್ಷದವರೇ ಮಾತನಾಡುತ್ತಿರುವುದು ನೋಡಿದರೆ ಅವರ ಪಕ್ಷದಲ್ಲೇ ಷಡ್ಯಂತ್ರ ನಡೆಯುತ್ತಿರುವುದು ಗೊತ್ತಾಗುತ್ತದೆ. ಕಾಂಗ್ರೆಸ್ ಈಗಾಗಲೇ ಸಿದ್ದರಾಮಯ್ಯ, ಡಿಕೆಶಿ ಅಂತಾ ವರ್ಟಿಕಲ್ ಆಗಿ ಡಿವೈಡ್ ಆಗಿದೆ. ಅದಕ್ಕೆ ಪ್ರೂಫ್ಗಳು ದಿನಾ ಒಂದೊಂದು ಕಾಣುತ್ತಾ ಇದೆ. ಕಾಂಗ್ರೆಸ್ ಪಕ್ಷ ಈಗಾಗಲೇ ಅಧಃಪತನದ ಅಂಚಿಗೆ ಹೋಗಿದೆ.
ಇದರ ಹಿಂದೆ ಯಾರಿದ್ದಾರೆ ಅಂತಾ ನಾನು ಹೇಳಲ್ಲ. ಪಕ್ಷದ ಕಚೇರಿಯಲ್ಲೇ ಕುಳಿತುಕೊಂಡು ಪಕ್ಷದ ನಾಯಕರ ವಿರುದ್ಧ ಮಾತಾಡಬೇಕಾದರೇ, ಅದರ ಹಿಂದೆ ಸ್ವಲ್ಪ ಬಲಿಷ್ಠರಾದವರು ಯಾರಾದರೂ ಇರಲೇಬೇಕಲ್ವಾ, ಅದು ಯಾರು ಏನು ಅಂತಾ ಅವರೇ ತಿಳಿದುಕೊಳ್ಳಲಿ ಎಂದರು.
ಉಪಚುನಾವಣೆ ಪ್ರಚಾರ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದಸರಾ ಉತ್ಸವ ಮುಗಿದ ಬಳಿಕ ಪ್ರಚಾರಕ್ಕೆ ಹೋಗುತ್ತೇವೆ. ಪಕ್ಷದ ನಿರ್ದೇಶನದ ಪ್ರಕಾರ ಹೋಗುತ್ತೇವೆ. ಉಪಚುನಾವಣೆ ಬರದೇ ಇರುತ್ತಿದ್ದರೆ ಕೋರ್ ಕಮಿಟಿಯಲ್ಲಿ ನಿರ್ಧಾರ ಆದಂತೆ ರಾಜ್ಯ ಪ್ರವಾಸಕ್ಕೆ ಹೋಗಬೇಕಿತ್ತು. ನಮಗೆ ಉಪಚುನಾವಣೆ ಕ್ಷೇತ್ರಗಳು ಕೂಡಾ ಸವಾಲಿನ ಕ್ಷೇತ್ರಗಳು, ಉಪಚುನಾವಣೆ ಮುಗಿದ ಬಳಿಕ ಪ್ರವಾಸದ ದಿನಾಂಕ ನಿಗದಿಯಾಗುತ್ತದೆ ಎಂದರು.
ಬೆಂಗಳೂರು ನಗರ ಉಸ್ತುವಾರಿಗೆ ಸಚಿವರ ನಡುವೆ ಫೈಟ್ ವಿಚಾರ ಕುರಿತು ಮಾತನಾಡಿದ ಡಿವಿಎಸ್, ಸಚಿವ ಸ್ಥಾನ, ಉಸ್ತುವಾರಿ ಸ್ಥಾನ ಕೊಡುವುದು ಸಿಎಂ ಪರಮಾಧಿಕಾರ. ಅವರು ಆಡಳಿತದ ಕ್ಯಾಪ್ಟನ್. ಯಾರ್ಯಾರು ಬ್ಯಾಟಿಂಗ್ ಮಾಡಬೇಕು, ಬೌಲಿಂಗ್ ಮಾಡಬೇಕು, ಫೀಲ್ಡಿಂಗ್ ಮಾಡಬೇಕು, ಅವರ ಸೀರೀಸ್ ಏನು ಅಂತಾ ಸಿಎಂ ಆಲೋಚನೆ ಮಾಡುತ್ತಾರೆ ಬೆಂಗಳೂರು ಉಸ್ತುವಾರಿ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದರು.
ಕಮಲಾನಗರಕ್ಕೆ ಭೇಟಿ,ವೈಯಕ್ತಿಕವಾಗಿ ಪರಿಹಾರ ವಿತರಣೆ:
ಕಮಲಾನಗರಕ್ಕೆ ಕೇಂದ್ರ ಮಾಜಿ ಸಚಿವ ಡಿ ವಿ ಸದಾನಂದ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಚಿವ ಗೋಪಾಲಯ್ಯ, ಮಾಜಿ ಉಪಮೇಯರ್ ಎಸ್ ಹರೀಶ್ ಡಿವಿಎಸ್ಗೆ ಸಾಥ್ ನೀಡಿದ್ದು, ಸಂತ್ರಸ್ತರಿಗೆ ಪರಿಹಾರ ವಿತರಿಸಿ ಸಾಂತ್ವನ ಹೇಳಿದರು. ಆರು ಮನೆಗಳಲ್ಲಿದ್ದ ಕುಟುಂಬಸ್ಥರಿಗೆ ಡಿವಿಎಸ್ ಪರಿಹಾರ ವಿತರಣೆ ಮಾಡಿದರು. ಸ್ವಂತವಾಗಿ ತಲಾ 1 ಲಕ್ಷ ರೂ ಪರಿಹಾರ ನೀಡಿದರು.
ಕಮಲಾನಗರದಲ್ಲಿ ಕಟ್ಟಡ ಕುಸಿತ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಸದಾನಂದಗೌಡ, ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡದಿಂದ ಜನರ ಸ್ಥಳಾಂತರ ಮಾಡದೇ ಇರುತ್ತಿದ್ದರೆ ಇನ್ನಷ್ಟು ಅನಾಹುತ ಆಗುತ್ತಿತ್ತು. ಕಾರ್ಪೋರೇಷನ್ ನವರು ಕೇವಲ ನೋಟಿಸ್ ಕೋಡೋದಲ್ಲ, ಒಂದು ರೌಂಡ್ ಇಂತಹ ಕಟ್ಟಡಗಳನ್ನು ಗುರುತಿಸಿ ಶಿಫ್ಟ್ ಮಾಡಬೇಕು. ಈ ಬಗ್ಗೆ ನಾನು ಮತ್ತು ಸಚಿವ ಗೋಪಾಲಯ್ಯ ಬಿಬಿಎಂಪಿ ಆಯುಕ್ತರ ಜೊತೆ ಮಾತಾಡುತ್ತೇವೆ ಎಂದರು.