ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರು ಚುನಾವಣೆಗೂ ಮುನ್ನವೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಪಲಾಯನ ಮಾಡಿದ್ದಾರೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಸದಾನಂದಗೌಡ ಟೀಕಿಸಿದ್ದಾರೆ.
ಈಟಿವಿ ಭಾರತಕ್ಕೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಆಡಳಿತ ವೈಖರಿ, ಬಿಜೆಪಿ ಸಂಘಟನಾ ಶಕ್ತಿ ಹಾಗೂ ಸದಾನಂದ ಗೌಡರ ಅಭಿವೃದ್ದಿ ಕೆಲಸ, ಸರಳ ನಡವಳಿಕೆಗೆ ಹೆದರಿ ದೇವೇಗೌಡರು ಸ್ಪರ್ಧೆ ಮಾಡದೇ ಬೇರೆ ಕ್ಷೇತ್ರಕ್ಕೆ ಪಲಾಯನ ಮಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಯಾರೇ ಸ್ಪರ್ಧಿಸಿದರು ಗೆಲ್ಲುತ್ತೇನೆ. ಇದನ್ನು ನಾನು ಅಹಂಕಾರ, ಅಹಂಭಾವ ಹಾಗೂ ಅತೀಯಾದ ಆತ್ಮವಿಶ್ವಾಸದಿಂದ ಹೇಳುತ್ತಿಲ್ಲ. ಕ್ಷೇತ್ರದಲ್ಲಿ ಮಾಡಿದ ಉತ್ತಮ ಕೆಲಸಗಳನ್ನು ಆಧರಿಸಿ, ಮೋದಿ ಅಲೆ ಮತ್ತು ಬಿಜೆಪಿ ಅಭ್ಯರ್ಥಿಯಾದ ನನ್ನ ಬಗ್ಗೆ ಇರುವ ಉತ್ತಮ ಅಭಿಪ್ರಾಯದಿಂದ ತಮ್ಮ ಗೆಲುವು ನಿಶ್ಚಿತ ಎಂದು ಹೇಳುತ್ತಿದ್ದೇನೆ ಎಂದು ತಿಳಿಸಿದರು.
ಬಿಜೆಪಿಯು ಜಾತಿ, ಮತ, ಧರ್ಮ ಆಧರಿಸಿ ಮತ ಕೇಳುವುದಿಲ್ಲ. ಮೋದಿ ಆಡಳಿತ, ಸುಭದ್ರ ನಾಯಕತ್ವ ಆಧರಿಸಿ ಮತ ಕೇಳುತ್ತೇವೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿಪಕ್ಷಗಳಲ್ಲಿ ಸಾಮ್ಯತೆ ಇಲ್ಲ. ಎರಡೂ ಪಕ್ಷಗಳಲ್ಲಿ ಒಬ್ಬರನ್ನೊಬ್ಬರು ಕಾಲೆಳೆಯುತ್ತಿದ್ದಾರೆ. ಮೈಸೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಲ್ಲಿಸುವ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿಯೇ ಸೋಲಿಸುತ್ತಾರೆ, ನೋಡುತ್ತಾ ಇರಿ. ಅಲ್ಲದೇ ಅಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದು ಬರುತ್ತಾರೆ ಎಂಬ ಭರವಸೆಯ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಕಪ್ಪಕಾಣಿಕೆ ನೀಡಿದ್ದಾರೆ ಎನ್ನಲಾದ ಮಾಹಿತಿ ಇರುವ ಡೈರಿ ಫೇಕ್ ಡೈರಿಯಾಗಿದೆ. ಡೈರಿ ವಿಚಾರ ಕಾಂಗ್ರೆಸ್ ಪಕ್ಷದ ಚುನಾವಣೆ ಗಿಮಿಕ್ ಎಂದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರನ್ನು ಬಿಜೆಪಿ ಟಾರ್ಗೆಟ್ ಮಾಡಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವ ಸದಾನಂದ ಗೌಡ, 22ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬೇಕು ಎನ್ನುವ ಗುರಿಯನ್ನ ಬಿಜೆಪಿ ಇಟ್ಟುಕೊಂಡಿರುವಾಗ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಸಹಜವಾಗಿ ಟಾರ್ಗೆಟ್ ಆಗುತ್ತಾರೆ ಎಂದು ಉತ್ತರಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 300 ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಪಕ್ಷ ಕಳೆದ ಬಾರಿ ಪಡೆದ 44 ಸೀಟುಗಳಿಗಿಂತಲೂ ಕಡಿಮೆ ಸೀಟುಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದರು.