ನವದೆಹಲಿ/ಬೆಂಗಳೂರು: ಭಾರತವನ್ನು ಜಾಗತಿಕ ಪೆಟ್ರೋಕೆಮಿಕಲ್ಸ್ ಕೈಗಾರಿಕಾ ತಾಣವಾಗಿ ರೂಪಿಸಲು ತಮ್ಮ ಇಲಾಖೆಯು ಅನೇಕ ಯೋಜನೆಗಳನ್ನು ರೂಪಿಸಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ನವದೆಹಲಿಯಲ್ಲಿ ಪೆಟ್ರೋಕೆಮಿಕಲ್ಸ್ ಮತ್ತು ಪ್ಲಾಸ್ಟಿಕ್ ಸಂಸ್ಕರಣಾ ಉದ್ಯಮದಲ್ಲಿ ತಂತ್ರಜ್ಞಾನ ನಾವೀನ್ಯತೆಗಾಗಿ ನೀಡಲಾಗುವ ರಾಷ್ಟ್ರೀಯ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದ ಸಚಿವರು, ದೇಶದಲ್ಲಿ ಈಗಾಗಲೇ ಸಾಕಷ್ಟು ಪ್ಲಾಸ್ಟಿಕ್ ಉದ್ಯಮಗಳು ಇದ್ದಾಗ್ಯೂ ವೈದ್ಯಕೀಯ ಸಲಕರಣೆಗಳು, ವೈಜ್ಞಾನಿಕ ಉಪಕರಣಗಳು, ದೂರಸಂಪರ್ಕ-ನೆಟ್‌ವರ್ಕಿಂಗ್ ಉಪಕರಣಗಳು, ವಾಹನಗಳು, ಎಲೆಕ್ಟ್ರಾನಿಕ್ಸ್, ಮೊಬೈಲ್, ಕೈಗಾರಿಕೆ ಇವೇ ಮುಂತಾದ ಉದ್ದೇಶಗಳಿಗೆ ಬಳಸುವ ಉನ್ನತ ಶ್ರೇಣಿಯ ಪ್ಲಾಸ್ಟಿಕ್ ಉತ್ಪಾದಿಸುವಲ್ಲಿ ಹಿಂದೆ ಬಿದ್ದಿದ್ದೇವೆ.
ಅದಕ್ಕಾಗಿ ದೇಶದ ಬೇರೆ ಬೇರೆ ಭಾಗಗಳಲ್ಲಿ 6 ಪ್ಲಾಸ್ಟಿಕ್ ಪಾರ್ಕ್ಗಳನ್ನು (ಪಾಸ್ಲಿಕ್ ಸಂಬಂಧಿತ ಕೈಗಾರಿಕಾಭಿವೃದ್ಧಿ ಕೇಂದ್ರಗಳು) ನಿರ್ಮಿಸುವ ಕಾರ್ಯ ಚಾಲನೆಯಲ್ಲಿದೆ. ಹಾಗೆಯೇ, ಇನ್ನೂ ಎರಡು ಪ್ಲಾಸ್ಟಿಕ್ ಪಾರ್ಕ್ಗಳಿಗೆ (ಮಂಗಳೂರು ಮತ್ತು ಘೋರಕ್ಪುರ) ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಇವು ಮುಂಬರುವ ದಿನಗಳಲ್ಲಿ ವಿಶ್ವ ದರ್ಜೆಯ ಪ್ಲಾಸ್ಟಿಕ್ ಕೈಗಾರಿಕಾ ಕ್ಲಸ್ಟರ್‌ಗಳಾಗಿ ಅಭಿವೃದ್ಧಿಗೊಳ್ಳುವುದು ನಿಶ್ಚಿತ. ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಜಿಡಿಪಿಗೆ ದೊಡ್ಡಪಾಲು ನೀಡಲಿದೆ ಎಂದರು.
ನಮ್ಮ ಜನರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಿದೆ. ಪೆಟ್ರೋಕೆಮಿಕಲ್ಸ್ ವಲಯವು ದೇಶದ ಜಿಡಿಪಿಗೆ ಗಮನಾರ್ಹ ಕೊಡುಗೆ ನೀಡುವುದರ ಜೊತೆಗೆ 2024ರ ವೇಳೆಗೆ ದೇಶವನ್ನು 5 ಸಹಸ್ರಕೋಟಿ ಡಾಲರ್ ಆರ್ಥಿಕತೆಯಾಗಿ ರೂಪಿಸಬೇಕು ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕನಸನ್ನು ನನಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಸದಾನಂದ ಗೌಡ ವಿವರಿಸಿದರು.
ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ದೇಶಾದ್ಯಂತ 42 ಕೇಂದ್ರಗಳನ್ನು ಹೊಂದಿದ್ದು ಪ್ಲಾಸ್ಟಿಕ್ ಮತ್ತು ಪೆಟ್ರೋಕೆಮಿಕಲ್ಸ್ ಕೈಗಾರಿಕೆಗಳಿಗೆ ಅಗತ್ಯವಾದ ಕೌಶಲ್ಯವಂತರನ್ನು ತಯಾರು ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಹಾಗಾಗಿ ದೇಶದಲ್ಲಿ ಈ ವಲಯಕ್ಕೆ ಬೇಕಾಗುವ ಕೌಶಲ್ಯ ಭರಿತ ಮಾನವ ಸಂಪನ್ಮೂಲ ವಿಫುಲವಾಗಿವಿದೆ. ಈ ಸಂಸ್ಥೆಯ ಮೂಲಕ ದೊಡ್ಡ ಮಟ್ಟದಲ್ಲಿ ಸಂಶೋಧನೆ ಮತ್ತು ಅವಿಷ್ಕಾರಗಳಿಗೆ ಕೂಡಾ ಉತ್ತೇಜನ ನೀಡಲಾಗುತ್ತಿದೆ.
ಉನ್ನತ ಶ್ರೇಣಿಯ ಪ್ಲಾಸ್ಟಿಕ್ ವಸ್ತುಗಳಿಗೆ ದೇಶಿಯಯವಾಗಿಯೇ ಸಿದ್ಧ ಮಾರುಕಟ್ಟೆಯಿದೆ. ಇವೆಲ್ಲವೂ ಭಾರತದ ಪೆಟ್ರೋಕೆಮಿಕಲ್ಸ್ ವಲಯವನ್ನು ಹೂಡಿಕೆಗೆ ಆಕರ್ಷಕ ತಾಣವನ್ನಾಗಿ ರೂಪಿಸಿದೆ. ಹಾಗಾಗಿ ದೇಶಿಯ ಹಾಗೂ ವಿದೇಶಿ ಬಂಡವಾಳಗಾರರು ಈ ವಲಯದಲ್ಲಿ ಹೂಡಿಕೆ ಮಾಡಲು ಮುಂದೆ ಬರಬೇಕು ಎಂದು ಸಚಿವ ಸದಾನಂದ ಗೌಡ ಕರೆ ನೀಡಿದರು. ಇಂತಹ ಪ್ರಶಸ್ತಿಗಳು ಹೆಚ್ಚಿನ ಸಂಶೋಧನೆಗೆ ಉತ್ತೇಜನ ನೀಡುತ್ತವೆ ಎಂದ ಅವರು ಎಲ್ಲ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.