ನವದೆಹಲಿ/ಬೆಂಗಳೂರು: ಕಾದಂಬರಿಗಾರ್ತಿ ಡಾ. ಗೀತಾ ನಾಗಭೂಷಣ ನಿಧನಕ್ಕೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಿರಿಯ ಸಾಹಿತಿಯ ನಿಧನವು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವುಂಟುಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ದೇವರು ಕುಟುಂಬದವರಿಗೆ, ಬಂಧು ಬಳಗದವರಿಗೆ, ಅಪಾರ ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಗದಗದಲ್ಲಿ 2010ರಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಡಾ. ಗೀತಾ ನಾಗಭೂಷಣ ಅವರು ಹತ್ತು ಹಲವು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಅವರು ಪ್ರತಿಷ್ಠಿತ ನಾಡೊಜ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಮಹಿಳೆ ಹಾಗೂ ಪ್ರತಿಷ್ಠಿತ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ಪಡೆದ ಮೊದಲ ಕನ್ನಡತಿ.
ಅವರ ‘ಬದುಕು’ ಕಾದಂಬರಿಗೆ 2004ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. 'ತಾವರೆಯ ಹೂವು' ಅವರ ಮೊದಲ (1968) ಕಾದಂಬರಿ. ಅವರು ರಚಿಸಿದ 'ಹಸಿಮಾಂಸ ಮತ್ತು ಹದ್ದುಗಳು' ತುಂಬಾ ಜನಪ್ರಿಯವಾಯಿತು. ನಂತರ ಈ ಕಾದಂಬರಿ ಚಲನಚಿತ್ರವೂ ಆಯಿತು. 27 ಕಾದಂಬರಿಗಳು, 12 ನಾಟಕಗಳು, ಹತ್ತಾರು ಸಣ್ಣ ಕಥೆಗಳು ಹೀಗೆ ಅವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮ ಛಾಪು ಮೂಡಿಸಿದ್ದರು ಎಂದು ಕೇಂದ್ರ ಸಚಿವರು ಪತ್ರಿಕಾ ಹೇಳಿಕೆ ಮೂಲಕ ತಿಳಿದ್ದಾರೆ.