ಬೆಂಗಳೂರು: ದಿಲ್ಲಿಯಲ್ಲಿ ರೈತರು ಅತ್ಯಂತ ಯಶಸ್ವಿಯಾಗಿ ನಡೆಸುತ್ತಿರುವ ಹೋರಾಟದ ಮಾದರಿಯಲ್ಲಿ ನಾಳೆ ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಯಲಿದೆ. ರೈತ ನಾಯಕರ ಈ ಹೋರಾಟಕ್ಕೆ ನಾವು ಬೆಂಬಲ ಸೂಚಿಸಿದ್ದೇವೆ. ಈ ಹೋರಾಟ ಕೂಡ ಯಶಸ್ವಿಯಾಗಲಿದೆ ಎಂದು ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ತಿಳಿಸಿದ್ದಾರೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿ, ಕಳೆದ ಎರಡು ತಿಂಗಳಿಂದ ದಿಲ್ಲಿಯಲ್ಲಿ ರೈತರು, ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ರೈತ ಪರ ಹೋರಾಟ ಬೆಂಬಲಿಸಿ ನಾಳೆ ನೈಸ್ ರಸ್ತೆ ಜಂಕ್ಷನ್ನಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ನಡೆಯುವ ರ‍್ಯಾಲಿಯಲ್ಲಿ ನಾವು ಕೂಡ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಲು ತೀರ್ಮಾನಿಸಿದ್ದೇವೆ.
ರೈತ ಸಂಘದ ಪ್ರಮುಖ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್ ಅವರು ಕರೆ ಕೊಟ್ಟಿರುವ ಹೋರಾಟ ಬೆಂಬಲಿಸುತ್ತೇವೆ. ನೈಸ್ ರಸ್ತೆ ಜಂಕ್ಷನ್ನಿಂದ ಹೋರಾಟ ಆರಂಭವಾಗಲಿದೆ. ಕುರುಬೂರು ಶಾಂತಕುಮಾರ್, ಬಯ್ಯಾರೆಡ್ಡಿ ಹಾಗೂ ನಾಗೇಂದ್ರ ಮತ್ತಿತರ ಹೋರಾಟಗಾರರು ಬಿಡದಿ, ಮಂಡ್ಯ ಭಾಗದಿಂದ ಆಗಮಿಸಿ ಹೋರಾಟದಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದ್ದಾರೆ.
ನಾವು ಸಹ ಕಾಂಗ್ರೆಸ್ ಪಕ್ಷದ ಎಲ್ಲಾ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ನಾವು ಮಾಹಿತಿ ರವಾನೆ ಮಾಡಿದ್ದು, ನೆಲಮಂಗಲ ಹಾಗೂ ಆನೇಕಲ್ ಭಾಗದ ನಾಯಕರು ನೈಸ್ ರಸ್ತೆಯ ಜಂಕ್ಷನ್ ತಲುಪುವಂತೆ ತಿಳಿಸಿದ್ದೇವೆ. ತುಮಕೂರು ಮತ್ತಿತರ ಭಾಗದಿಂದಲೂ ಸಹ ಸಾಧ್ಯವಾದರೆ ಟ್ರ್ಯಾಕ್ಟರ್ಗಳನ್ನು ತೆಗೆದುಕೊಂಡು ಬಂದು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದೇವೆ.
ಆನೇಕಲ್, ಸರ್ಜಾಪುರ ಹಾಗೂ ರಾಮನಗರ ಭಾಗದ ಕಾರ್ಯಕರ್ತರು ನಾಗೇಂದ್ರ, ಕುರುಬೂರು ಶಾಂತಕುಮಾರ್ ಹಾಗೂ ಬಯ್ಯಾರೆಡ್ಡಿ ಅವರು ಹೋರಾಟ ಆರಂಭಿಸುವ ಜಂಕ್ಷನ್ ಬಳಿ ಸೇರ್ಪಡೆಯಾಗುವಂತೆ ಸೂಚಿಸಿದ್ದೇವೆ. ಇನ್ನು ಕೋಲಾರ ಹಾಗೂ ಹೊಸಕೋಟೆ ಭಾಗದಿಂದ ಆಗಮಿಸುವ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಆಗಮಿಸಿ ಅಲ್ಲಿಂದ ಹೋರಾಟ ಆರಂಭಿಸುವಂತೆ ತಿಳಿಸಿದ್ದೇವೆ.
ಒಟ್ಟಾರೆ ರಾಜ್ಯದ ಎಲ್ಲಾ ರೈತ ನಾಯಕರು ಸೇರಿ ಕರೆ ಕೊಟ್ಟಿರುವ ಈ ಚಳುವಳಿಗೆ ನಾವು ಸಂಪೂರ್ಣ ಬೆಂಬಲ ಸೂಚಿಸಿ ಯಶಸ್ವಿಗೆ ಪ್ರಯತ್ನಿಸುತ್ತಿದ್ದೇವೆ. ರಾಜ್ಯ ರೈತ ಕಾಂಗ್ರೆಸ್ನ ಭಾಗವಾಗಿ ನಾವು ಇಂತಹ ಹೋರಾಟಗಳಿಗೆ ಬೆಂಬಲ ಸೂಚಿಸುತ್ತಿದ್ದೇವೆ. ಕೇವಲ ಇದೊಂದೇ ಹೋರಾಟವಲ್ಲ, ರೈತ ನಾಯಕರು ಕರೆ ಕೊಡುವ ಎಲ್ಲ ಹೋರಾಟಗಳಿಗೂ ನಾವು ಬೇಷರತ್ ಬೆಂಬಲ ಸೂಚಿಸುತ್ತೇವೆ. ಇದು ಯಾವುದೇ ಸಂದರ್ಭವಿರಲಿ ಅಥವಾ ಯಾವುದೇ ಬಣ್ಣವಿರಲಿ. ನಾವು ಭೇದ ತೋರಿಸುವುದಿಲ್ಲ. ಹೋರಾಟಕ್ಕೆ ಕರೆ ಕೊಟ್ಟ ಸಂದರ್ಭದಲ್ಲಿ ಕರ್ನಾಟಕ ಕಿಸಾನ್ ಕಾಂಗ್ರೆಸ್ ಆದ್ಯತೆ ಮೇರೆಗೆ ಬೆಂಬಲ ಸೂಚಿಸಲಿದೆ ಎಂದು ತಿಳಿಸಿದರು.
ಸರ್ಕಾರ ಗಂಭೀರತೆ ಮನದಟ್ಟು ಮಾಡಿಕೊಳ್ಳಲಿ:
ರೈತರಿಗೆ ಎದುರಾಗುತ್ತಿರುವ ಸಮಸ್ಯೆಯನ್ನು ಗಮನ ಸೆಳೆಯಲು ನಡೆಸುತ್ತಿರುವ ಹೋರಾಟ ಇದಾಗಿದ್ದು, ಇದನ್ನು ನಿಯಂತ್ರಿಸುವ ಕಾರ್ಯ ಮಾಡಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ರೈತರು ತರುವ ಟ್ರ್ಯಾಕ್ಟರ್ಗಳನ್ನು ತಡೆಯುವ ಕಾರ್ಯ ಮಾಡಿದರೆ ತಡೆದ ಸ್ಥಳದಲ್ಲಿ ಹೋರಾಟ ಮಾಡಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರ ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು. ರಾಜ್ಯದ ವಿವಿಧ ಭಾಗಗಳಿಂದ ಈಗಾಗಲೇ ರೈತ ನಾಯಕರು ವಿವಿಧ ವಾಹನಗಳನ್ನೇರಿ ಬರುತ್ತಿದ್ದಾರೆ. ಯಾರಿಗೂ ಸಮಸ್ಯೆ ಉಂಟು ಮಾಡಬೇಡಿ. ರೈತರು ಸಹ ಯಾವುದೇ ರೀತಿ ಸಂಚಾರ ದಟ್ಟಣೆಗೆ ತೊಂದರೆ ಉಂಟು ಮಾಡುವುದಿಲ್ಲ. ಅತ್ಯಂತ ವ್ಯವಸ್ಥಿತವಾಗಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಾರೆ ಎಂಬ ಭರವಸೆ ನಾವು ನೀಡುತ್ತೇವೆ ಎಂದರು.
ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ:
ರಾಜ್ಯದಲ್ಲಿರುವುದು ಭಂಡ ಸರ್ಕಾರ. ಇವರಿಗೆ ಕಿವಿ ಕೇಳುವುದಿಲ್ಲ ಹಾಗೂ ಕಣ್ಣು ಕಾಣಿಸುವುದಿಲ್ಲ. ಈಗಲಾದರೂ ರೈತರು ನಡೆಸುತ್ತಿರುವ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಮೂರು ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಕೇವಲ ಕಾರ್ಪೊರೇಟ್ ಕಂಪನಿಗಳ ಅನುಕೂಲಕ್ಕಾಗಿಯೇ ಕಾರ್ಯ ನಿರ್ವಹಿಸಬಾರದು. ಅವರ ಒತ್ತಡಕ್ಕೆ ಮಣಿದು ರೈತರ ಹಿತ ಮರೆಯಬಾರದು. ಮೂರು ದಿನಗಳ ಹಿಂದೆ ರಾಜ್ಯ ಕಾಂಗ್ರೆಸ್ ನಡೆಸಿದ ಹೋರಾಟಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲ ರೈತರ ಹೋರಾಟ ಯಶಸ್ವಿಯಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿ.
ರಾಜ್ಯದ ಮೂಲೆ ಮೂಲೆಯಿಂದ ಜನ ಆಗಮಿಸಿ ಕಾಂಗ್ರೆಸ್ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಸರ್ಕಾರವನ್ನು ಜನ ತೊಲಗಿಸುತ್ತಾರೆ ಎಂಬ ಸೂಚನೆಯನ್ನು ನಾವು ನಮ್ಮ ಹೋರಾಟದ ಮೂಲಕ ನೀಡಿದ್ದೇವೆ. ನಾಳಿನ ಹೋರಾಟ ಸಹ ರೈತಪರ ಹಾಗೂ ಪಕ್ಷಾತೀತ ಹೋರಾಟ ಆಗಿರುವ ಹಿನ್ನೆಲೆ ಸಂಪೂರ್ಣ ಯಶಸ್ಸು ಕಾಣಲಿದೆ. ಈ ಹೋರಾಟಕ್ಕೆ ಎಲ್ಲರ ಬೆಂಬಲ ಸಿಗಲಿದೆ ಎಂಬ ವಿಶ್ವಾಸ ನನಗಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಕಾರ್ಯಕರ್ತರು ಮಾತ್ರ ನಾಳೆ ಆಗಮಿಸಲಿದ್ದಾರೆ ಎಂದು ಸಚಿನ್ ಮೀಗಾ ತಿಳಿಸಿದರು.