ಬೆಂಗಳೂರು : ಉತ್ತರಕರ್ನಾಟಕದ ಮಹತ್ವದ ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಯನ್ನು ನೀವು ರಾಷ್ಟ್ರೀಯ ಯೋಜನೆಯನ್ನಾಗಿಯಾದರೂ ಮಾಡಿ ಅಂತಾರಾಷ್ಟ್ರೀಯ ಯೋಜನೆಯನ್ನಾಗಿಯಾರೂ ಮಾಡಿ ಅನುದಾನವನ್ನು ಎಲ್ಲಿಂದಲಾದರೂ ತನ್ನಿ. ಆದರೆ, ಯೋಜನೆ ಅನುಷ್ಠಾನಕ್ಕೆ ತನ್ನಿ ಎಂದು ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 68ರ ಅಡಿ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಅನುಷ್ಠಾನ ವಿಳಂಬ ಕುರಿತು ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದರು. ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ ನ್ಯಾಯಾಧಿಕರಣ 130 ಟಿಎಂಸಿ ಅಡಿ ನೀರು ಮಂಜೂರು ಮಾಡಿದೆ. ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524.256 ಮೀಟರ್ಗೆ ಎತ್ತರಿಸಲು ಅನುಮತಿ ನೀಡಿದೆ.
15 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಮಾಡಬಹುದಾಗಿದೆ. ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು. ಉತ್ತರಕರ್ನಾಟಕ ಶ್ರೀಮಂತಗೊಳಿಸುವ ಯೋಜನೆ ಇದಾಗಿದೆ. ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಗದಗ ಸೇರಿ ಏಳು ಜಿಲ್ಲೆಗಳಿಗೆ ನೀರಾವರಿಗೆ ಅನುಕೂಲವಾಗುತ್ತದೆ.
2017ರಲ್ಲಿ ಪರಿಷ್ಕೃತ ಅಂದಾಜ 52 ಸಾವಿರ ಕೋಟಿಯಿದೆ. ಇವತ್ತಿನ ಲೆಕ್ಕಕ್ಕೆ 65 ಸಾವಿರ ಕೋಟಿ ಆಗಿದೆ. ಇದನ್ನು ವಿಳಂಬ ಮಾಡುತ್ತಾ ಹೋದರೆ ಲಕ್ಷ ಕೋಟಿ ಆಗಲಿದೆ. ಹಾಗಾಗಿ, ತ್ವರಿತವಾಗಿ ಯೋಜನೆ ಮುಗಿಸಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರದಲ್ಲೇ ದೊಡ್ಡ ಯೋಜನೆ : ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರದಲ್ಲೇ ದೊಡ್ಡ ಯೋಜನೆಯಾಗಿದೆ. 3 ಹಂತದ ಯೋಜನೆ ಸೇರಿದತೆ 30 ಲಕ್ಷ ಎಕರೆ ನೀರಾವರಿ ಆಗಲಿದೆ. ಈಗಾಗಲೇ ಎರಡು ಹಂತದ ಯೋಜನೆಗೆ 2.73 ಲಕ್ಷ ಫಲವತ್ತಾದ ಭೂಮಿ ಕಳೆದುಕೊಂಡಿದ್ದೇವೆ. 78,854 ಕಟ್ಟಡ ತೆರವು ಮಾಡಲಾಗಿದೆ.
176 ಗ್ರಾಮಗಳು ಮುಳುಗಡೆಯಾಗಿದೆ. 136 ಪುನರ್ವಸತಿ ಕೇಂದ್ರ ಕಲ್ಪಿಸಲಾಗಿದೆ. ಮೂರನೇ ಹಂತಕ್ಕೆ 1.30 ಲಕ್ಷ ಎಕರೆ ಜಮೀನು, 20 ಹಳ್ಳಿ ಸ್ವಾಧೀನ ಪಡಿಸಿಕೊಳ್ಳಬೇಕಿದೆ. ಪುನರ್ವಸತಿ ಕೇಂದ್ರ ರಚಿಸಬೇಕಿದೆ. ಅದನ್ನು ಆದಷ್ಟು ತ್ವರಿತವಾಗಿ ಮಾಡಬೇಕು ಎಂದರು. ಮೂರನೆ ಹಂತದ ಯೋಜನೆ ಜಾರಿಗೆ ರಚಿಸಲಾಗಿರುವ ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಗೆ ಆಯುಕ್ತರು ಸೇರಿ 850 ಹುದ್ದೆ ಮಂಜೂರಾಗಿದ್ದು, ಅದರಲ್ಲಿ 460 ಹುದ್ದೆ ಖಾಲಿ ಇವೆ. ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಹಿಂದೆ ಆಳಿದವರೂ ಸೇರಿ ಎಲ್ಲ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದರು.
ತೆಲಂಗಾಣ ನೋಡಿ ಕಲಿಯಿರಿ : ನಾವು ತೆಲಂಗಾಣದ ರಾಜಕೀಯ ಇಚ್ಚಾಶಕ್ತಿಯನ್ನು ಮೆಚ್ಚಬೇಕು. 1.20 ಲಕ್ಷ ಕೋಟಿ ವೆಚ್ಚದ ಕಾಳೇಶ್ವರ ನೀರಾವರಿ ಯೋಜನೆಗೆ 2016 ರಲ್ಲಿ ಅಡಿಗಲ್ಲು ಹಾಕಿ ಅಂದೆ ಯೋಜನೆ ಉದ್ಘಾಟನೆ ದಿನಾಂಕವನ್ನು ಹಾಕಿದ್ದರು. 2019 ಜೂನ್ 21 ರಂದು ಉದ್ಘಾಟನೆ ಮಾಡಿದರು. ಕೇವಲ ಮೂರು ವರ್ಷದಲ್ಲಿ ಯೋಜನೆ ಮುಗಿದಿದೆ. ಜಗತ್ತಿನ ಅತಿ ದೊಡ್ಡ ಏತ ನೀರಾವರಿ ಯೋಜನೆಯನ್ನು ಅವರು ಮುಗಿಸಿದ್ದಾರೆ.
ಆದರೆ, ನ್ಯಾಯಾಧೀಕರಣ ತೀರ್ಪು ನೀಡಿ ಹತ್ತು ವರ್ಷವಾಗಿದೆ. ಆದರೂ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ. ತೆಲಂಗಾಣದವರು ನಮ್ಮ ಯೋಜನೆಯ ಎರಡರಷ್ಟು ಹಣ ವ್ಯಯಿಸಿ ಯೋಜನೆ ಜಾರಿ ಮಾಡಿದ್ದಾರೆ. ಅಲ್ಲಿನ ಸಿಎಂ ಚಂದ್ರಶೇಖರ್ ಅವರನ್ನು ನಾವು ಮೆಚ್ಚಲೇಬೇಕು. ಅವರ ನೆರಳಾದರೂ ರಾಜ್ಯದ ಮೇಲೆ ಬೀಳಲಿ, ಹೊಸದಾಗಿ ಹುಟ್ಟಿದ ರಾಜ್ಯ ಇಷ್ಟು ಬೇಗ ಯೋಜನೆ ಮುಗಿಸಿದ್ದನ್ನು ನೋಡಿಯಾದರೂ ನಾವು ಕಲಿಯಬೇಕು ಎಂದರು.
ಬೇಗನೆ ಅನುಷ್ಠಾನಕ್ಕೆ ಆಗ್ರಹ : ರಾಷ್ಟ್ರದ ವರಮಾನ ಹೆಚ್ಚು ಮಾಡುವ ಯೋಜನೆ ಇದಾಗಿದೆ. ಬೇಗನೆ ಯೋಜನೆ ಕೈಗೆತ್ತಿಕೊಳ್ಳಬೇಕು. 2021-22 ರ ಬಜೆಟ್ನಲ್ಲಿ ಯೋಜನೆ ಅನುಷ್ಠಾನಕ್ಕೆ ಸಂಕಲ್ಪ ನಮ್ಮದು ಎಂದು ಸರ್ಕಾರ ಹೇಳಿದೆ. ರಾಷ್ಟ್ರೀಯ ಯೋಜನೆ ಮಾನ್ಯತೆ ಪಡೆಯುವುದು ಪ್ರಕಟಿಸಿದೆ.
ಕೇಂದ್ರದ ನೆರವಿನೊಂದಿಗೆ ಯೋಜನೆ ಅನುಷ್ಠಾನಕ್ಕೆ ಆಧ್ಯತೆ ನೀಡಲಾಗುತ್ತದೆ ಎಂದಿದೆ. ಆದರೆ ನೀವು ರಾಷ್ಟ್ರೀಯ ಯೋಜನೆಯನ್ನಾದರೂ ಮಾಡಿ, ಅಂತಾರಾಷ್ಟ್ರೀಯ ಯೋಜನೆಯನ್ನಾದರೂ ಮಾಡಿ, ಅನುದಾನ ಎಲ್ಲಿಂದಲಾದರೂ ತನ್ನಿ, ಕೇಂದ್ರದಿಂದಲೋ ವಿಶ್ವಬ್ಯಾಂಕ್ನಿಂದಲೋ ನಮಗೆ ಗೊತ್ತಿಲ್ಲ. ಆದರೆ, ಯೋಜನೆ ಅನುಷ್ಠಾನಕ್ಕೆ ತನ್ನಿ ಎಂದು ಒತ್ತಾಯಿಸಿದರು.
ಮೂರನೇ ಹಂತದ ಯೋಜನೆ ಕಾಮಗಾರಿಯ ಕೆಲಸ ಆರಂಭಿಸಬೇಕು. ಯಾವ ಕಾರಣಕ್ಕೂ ವಿಳಂಬ ಮಾಡಬೇಡಿ, ಪ್ರತಿ ಕ್ಷಣವೂ ಮುಖ್ಯ, ಜನ ಸಂಕಟದಲ್ಲಿದ್ದಾರೆ. ಮಹದಾಯಿ, ಮೇಕೆದಾಟು, ಎತ್ತಿನ ಹೊಳೆ, ಕೃಷ್ಣಾ ಮೂರನೇ ಹಂತ, ನಾಲ್ಕೂ ಯೋಜನೆಗೆ ಒತ್ತುಕೊಟ್ಟು ಒಂದೂವರೆ ವರ್ಷದಲ್ಲಿ ಚರಿತ್ರೆ ನಿರ್ಮಿಸಿ ಎಂದರು.
ಜಲಾಶಯದ ಗೇಟ್ ಕತ್ತರಿಸಿದ್ದು ದುರ್ವೈವ : ಆಲಮಟ್ಟಿ ಜಲಾಶಯ ಕಟ್ಟಿ ಆಗಿದೆ. ಆದರೆ ಹಿಂದೆ ಸುಪ್ರೀಂ ಕೋರ್ಟ್ ಹೇಳಿದ್ದರಿಂದ ಗೇಟ್ ಕಟ್ ಮಾಡಿ ಎತ್ತರ ಕಡಿಮೆ ಮಾಡಲಾಯಿತು. ಇದು ನಮ್ಮ ದುರ್ದೈವ ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಗೋವಿಂದ ಕಾರಜೋಳ, ನಮ್ಮ ದುರ್ವೈವ ಅಲ್ಲ, ಕೇಂದ್ರ ಸಚಿವರ ಪದ ಬಳಕೆಯಿಂದ ಆ ರೀತಿ ಆಯಿತು ಎಂದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಎಸ್.ಆರ್.ಪಾಟೀಲ್, ಆ ಸಚಿವರು ಇಂದು ನಮ್ಮ ಜೊತೆ ಇಲ್ಲ. ಹಾಗಾಗಿ ಅವರ ಹೆಸರು ಇಲ್ಲಿ ಉಲ್ಲೇಖಿಸಲ್ಲ ಎನ್ನುತ್ತಾ ರಾಜ್ಯ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಡಬಲ್ ಇಂಜಿನ್ ಸರ್ಕಾರವಿದೆ. ಇದು ನಿಮಗೆ ಗೋಲ್ಡನ್ ಟೈಮ್, ಮೋದಿ ಬಳಿ ಹೋಗಿ. ಕೇಂದ್ರದ ನೆರವು ಪಡೆದುಕೊಂಡು ಯೋಜನೆ ಅನುಷ್ಠಾನಕ್ಕೆ ತನ್ನಿ ಎಂದರು.
ಎಲ್ಲಾ ಉತ್ತರ ಕರ್ನಾಟಕದವರು : ಎಸ್.ಆರ್. ಪಾಟೀಲ್ ಮಾತನಾಡುವ ವೇಳೆ ಎಲ್ಲವೂ ಉತ್ತರ ಕರ್ನಾಟಕಮಯವಾಗಿದೆ. ಮುಖ್ಯಮಂತ್ರಿಗಳು ನಮ್ಮ ಭಾಗದವರು, ಜಲಸಂಪನ್ಮೂಲ ಸಚಿವ ಕಾರಜೋಳ ಕೂಡ ನಮ್ಮ ಭಾಗದವರೆ, ಸಭಾಪತಿಗಳೂ ನಮ್ಮ ಭಾಗಕ್ಕೆ ಸೇರಿದವರು, ಎಲ್ಲಾ ನಮ್ಮ ಭಾಗದವರೆ ಇದ್ದೇವೆ. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಜಾರಿಗೊಳಿಸಿ ನಮ್ಮ ಭಾಗಕ್ಕೆ ನ್ಯಾಯ ಕೊಡಿಸಬೇಕು ಎಂದರು.
ಓದಿ: ಪೆಟ್ರೋಲ್ ಬೆಲೆ Just 7 ಪೈಸೆ ಏರಿಕೆಯಾಗಿದ್ದಕ್ಕೆ ವಾಜಪೇಯಿ ಕ್ರಿಮಿನಲ್ ಲೂಟ್ ಎಂದಿದ್ದರು: ಸಿದ್ದರಾಮಯ್ಯ